ಎರ್ಮಾಳು ಗ್ರಾಮ ಪಂಚಾಯಿತಿಯ ಎರಡನೇ ಅವಧಿಗಾಗಿ ಬುಧವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತೆ ಸುರೇಖಾ ರವರು ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಕಸ್ತೂರಿ ಪ್ರವೀಣ್ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ವರುಣ್ ಕರ್ತವ್ಯ ನಿರ್ವಹಿಸಿದ್ದರು. ಪಿಡಿಒ ರಜನಿ ಸಹಕರಿಸಿದ್ದರು.. ತೆಂಕ ಗ್ರಾ. ಪಂ. ನಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ `ಅ’ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾತಿ ಪ್ರಕಾರ ನಿಗದಿಯಾಗಿತ್ತು. 11 ಸದಸ್ಯ ಬಲದ ತೆಂಕ ಗ್ರಾ. ಪಂ. ನಲ್ಲಿ 6ಕಾಂಗ್ರೆಸ್ ಬೆಂಬಲಿತರು ಹಾಗೂ 5 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಮತದಾನದಲ್ಲಿ ಬಿಜೆಪಿ ಬೆಂಬಲಿತರಾದ ಜಯಶ್ರೀ ಹರೀಶ್ ಕೋಟ್ಯಾನ್ ಅವರನ್ನು6- 4 ಮತಗಳಿಂದ ಸೋಲಿಸಿ ಸುರೇಖಾ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಸದಸ್ಯೆ ಅಮಣಿ ಅವರನ್ನು6-5 ಮತಗಳ ಅಂತರದಲ್ಲಿ ಸೋಲಿಸಿ ಕಾಂಗ್ರೆಸ್ ಬೆಂಬಲದೊಂದಿಗೆ ಕಸ್ತೂರಿ ಪ್ರವೀಣ್ ಆಯ್ಕೆಯಾದರು. ಅಧ್ಯಕ್ಷ ಸ್ಥಾನದ ಮತದಾನದ ವೇಳೆ ಓರ್ವರ ಮತವು ಅಸಿಂಧುವಾಗಿತ್ತು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಡಿಸಿಸಿ ಅಧ್ಯಕ್ಷ ಅಶೋಕ್ ಕೊಡವೂರು, ಕಾಪು ಬ್ಲಾಕ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಸ್ಥಾನೀಯ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್, ದೀಪಕ್ ಕುಮಾರ್ ಎರ್ಮಾಳ್, ಬಾಲಚಂದ್ರ ಎರ್ಮಾಳ್, ಸುನಿಲ್ ಬಂಗೇರ, ಆಶಾ ಕಟಪಾಡಿ, ಅಶ್ವಿನಿ ಕಾಪು ಮತ್ತಿತರು ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.


