
ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಷ್ಟು ದಿನ ಟೂರ್ನಿಯಿಂದ ಬಹುತೇಕ ಔಟ್ ಆಗಿದ್ದ ಪಾಕಿಸ್ತಾನ ತಂಡ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಮತ್ತೆ ಸೆಮೀಸ್ ರೇಸ್ ಗೆ ಆಗಮಿಸಿದ್ದಲ್ಲದೇ ಭಾರತೀಯ ಅಭಿಮಾನಿಗಳ ಪಾಲಿಗೆ ಹೊಸ ಟೆನ್ಶನ್ ಗೆ ಕಾರಣವಾಗಿದೆ... ಇಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ 33 ರನ್ (ಡಕ್ವರ್ತ್ ಲೂಯಿಸ್ ನಿಯಮದನ್ವಯ) ಅಂತರದ ಭರ್ಜರಿ ಜಯ ಸಾಧಿಸಿದೆ. ಕೇವಲ ಗೆಲುವು ಮಾತ್ರವಲ್ಲದೇ ಪಾಕಿಸ್ತಾನ ತಂಡದ ನೆಟ್ ರನ್ ರೇಟ್ ಅನ್ನೂ ಕೂಡ ಈ ಗೆಲುವು ಬದಲಿಸಿದ್ದು, ಇದೀಗ ಪಾಕಿಸ್ತಾನ ತಂಡ ಅಂಕ ಪಟ್ಟಿಯಲ್ಲಿ ಏಕಾಏಕಿ 3ನೇ ಸ್ಥಾನಕ್ಕೆ ಜಿಗಿಯುವಂತೆ ಮಾಡಿದೆ. ಇಂದಿನ ಭರ್ಜರಿ ಗೆಲುವಿನೊಂದಿಗೆ ಪಾಕಿಸ್ತಾನದ ನೆಟ್ ರನ್ ರೇಟ್ +1.117ಕ್ಕೆ ಏರಿಕೆಯಾಗಿದ್ದು, ಇದೇ ಕಾರಣಕ್ಕೆ 4 ಅಂಕಗಳ ಹೊರತಾಗಿಯೂ ನೆಟ್ ರನ್ ರೇಟ್ ಆಧಾರದಲ್ಲಿ 3ನೇ ಸ್ಥಾನಕ್ಕೇರಿದೆ. 3ನೇ ಸ್ಥಾನದಲ್ಲಿದ್ದ ಬಾಂಗ್ಲಾದೇಶ -1.276ನೆಟ್ ರನ್ ರೇಟ್ ನೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಅಂತೆಯೇ ತನ್ನ ಸೆಮೀಸ್ ಆಸೆಯನ್ನು ಪಾಕಿಸ್ತಾನ ಜೀವಂತವಾಗಿರಿಸಿಕೊಂಡಿದ್ದು, ಭಾರತ ತಂಡದ ಒಂದೇ ಒಂದು ತಪ್ಪು ಹೆಜ್ಜೆ ಪಾಕಿಸ್ತಾನಕ್ಕೆ ಸೆಮೀಸ್ ಹಾದಿಯನ್ನು ಸುಗಮಗೊಳಿಸಲಿದೆ

