×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಂಜೇಶ್ವರದಲ್ಲಿ ಗಡಿನಾಡ ಯಕ್ಷ ಸಂಭ್ರಮ ಸಮಾರೋಪ : ಯಕ್ಷಗಾನ ರಂಗಕ್ಕೆ ಗಡಿನಾಡು ಕನ್ನಡಿಗರ ಕೊಡುಗೆ ಅಪಾರ: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ: ಯಕ್ಷಗಾನಕ್ಕೆ ಮೂಲ ಪುರುಷ ಎಂದೇ ಖ್ಯಾತರಾದ ಕವಿ ಪ್ರಾರ್ಥಿಸುಬ್ಬ ಅವರ ತವರೂರಾದ ಗಡಿನಾಡಿನ ಶ್ರೇಷ್ಠ ಯಕ್ಷಗಾನ ಕಲಾವಿದರು, ಸಂಸ್ಥೆಗಳು ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಭಾನುವಾರ ಕಾಸರಗೋಡಿನ ಮಂಜೇಶ್ವರ ಕಡಂಬಾರು ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು ಹಾಗೂ ದೇವಳದ ಸಹಕಾರದಲ್ಲಿ ಯಕ್ಷ ಬಳಗ ಹೊಸಂಗಡಿ ಮಂಜೇಶ್ವರ ತಂಡದಿಂದ ಹಮ್ಮಿಕೊಂಡ 36ನೇ ವರ್ಷದ ತಾಳಮದ್ದಳೆ ಕೂಟ ಗಡಿನಾಡ ಯಕ್ಷ ಸಂಭ್ರಮದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಹ ನೀಡುತ್ತಾ ಬಂದಿದೆ. ಯಕ್ಷಗಾನದ ಸಂಸ್ಕೃತಿ ,ಹಿರಿಮೆಯನ್ನು ನಮ್ಮ ಯುವ ಪೀಳಿಗೆಗೆ ದಾಟಿಸಬೇಕಾದರೆ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಬೇಕು. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ 90ಕ್ಕೂ ಅಧಿಕ ಶಾಲೆಗಳಲ್ಲಿ 3,000ಕ್ಕೂ ಅಧಿಕ ವಿದ್ಯಾರ್ಥಿಗಳು ಯಕ್ಷ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇದು ಇತರ ಜಿಲ್ಲೆಗಳಿಗೂ ಮಾದರಿಯಾಗಬೇಕು ಎಂದು ಅವರು ತಿಳಿಸಿದರು.

ಯಕ್ಷಗಾನದ ತೆಂಕು ಹಾಗೂ ಬಡಗುತಿಟ್ಟು ಪ್ರಕಾರಕ್ಕೆ ನಿರಂತರ ಪ್ರೋತ್ಸಾಹ ಸಿಗುತ್ತಿದೆ. ಶಿಕ್ಷಕರು , ವೈದ್ಯರು , ಇಂಜಿನಿಯರ್ ಸೇರಿದಂತೆ ಸುಶಿಕ್ಷಿತ ಮಂದಿ ಈ ಯಕ್ಷಗಾನ ಕಲಾವಿದರಾಗುತ್ತಿದ್ದಾರೆ. ಆದರೆ ಯಕ್ಷಗಾನ ಇನ್ನೊಂದು ಪ್ರಕಾರವಾದ ಮೂಡಲಪಾಯ ಪ್ರೋತ್ಸಾಹಕರಿಲ್ಲದೆ ಸೊರಗುತ್ತಿದೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ಇಂದು ವೈಭವದ ಪರಾಕಾಷ್ಟೆಯನ್ನು ಮುಟ್ಟಲು ಹಿರಿಯ ಯಕ್ಷಗಾನ ಕಲಾವಿದರು ಸಲ್ಲಿಸಿದ ನಿಸ್ಸಾರ್ಥ ಕಲಾ ಸೇವೆಯೇ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.

ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವುದರಿಂದ ಅವರಲ್ಲಿ ಧಾರ್ಮಿಕ ನೈತಿಕ ಪ್ರಜ್ಞೆಯನ್ನು ಬೆಳೆಸಿದಂತಾಗುತ್ತದೆ. ಗುರು ಹಿರಿಯರಿಗೆ ಗೌರವ ಕೊಡುತ್ತಾರೆ. ಇದರಿಂದ ವೃದ್ಧಾಪ್ಯದಲ್ಲಿ ತಂದೆ ತಾಯಿ ವೃದ್ಧಾಶ್ರಮ ಸೇರುವ ಪ್ರಮೇಯ ತಪ್ಪುತ್ತದೆ. ಅಲ್ಲದೆ ಯಕ್ಷಗಾನ ಕಲಿಕೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೂ ಪೂರಕವಾಗಿದೆ ಎಂಬುದಕ್ಕೆ ಇತ್ತೀಚಿನ ಶೈಕ್ಷಣಿಕ ಫಲಿತಾಂಶಗಲೇ ಸಾಕ್ಷಿ ಎಂದವರು ತಿಳಿಸಿದರು.

ಕಾಸರಗೋಡು ಜಿಲ್ಲಾ ಪಂಚಾಯತಿನ ಸದಸ್ಯ ಹರ್ಷದ್ ವರ್ಕಾಡಿ ಮಾತನಾಡಿ, ಕಾಸರಗೋಡು ಗಡಿನಾಡ ಭಾಗವಾಗಿದ್ದರೂ, ಇಲ್ಲಿನ ಕಲಾಪ್ರೇಮಿಗಳು ಯಕ್ಷಗಾನವನ್ನು ಅತಿಯಾಗಿ ಪ್ರೀತಿಸುತ್ತಾರೆ . ಈ ಮಣ್ಣಿನಲ್ಲಿ ದೊಡ್ಡ ಯಕ್ಷಗಾನ ಕಲಾವಿದರು ಹುಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮುಕ್ತಸರ ಸೂರ್ಯನಾರಾಯಣ ಅಯ್ಯ, ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ರಾಮಚಂದ್ರ ರಾವ್, ಯಕ್ಷಗಾನ ಅಕಾಡೆಮಿ ಸದಸ್ಯರುಗಳಾದ ರಾಘವ ಎಚ್., ಶುಭ ಹಾರೈಸಿದರು.
ಅಕಾಡೆಮಿ ಸದಸ್ಯರುಗಳಾದ ಗುರುರಾಜ ಭಟ್, ರಾಜೇಶ್ ಕುಳಾಯಿ, ಸುಧಾಕರ ಶೆಟ್ಟಿ ಉಳ್ಳಾಲ, ವಿನಯ ಕುಮಾರ್ ಶೆಟ್ಟಿ, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾಧ್ಯ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರಿಗೆ ಗೌರವಾರ್ಪಣೆ ನಡೆಯಿತು. ಹಿಮ್ಮೇಳ ಕಲಾವಿದ ಕೇಶವ ಆಚಾರ್ಯ ಕಿನ್ಯ ಇವರಿಗೆ ಯಕ್ಷ ಬಳಗ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲಾವಿದ ಹರಿಶ್ಚಂದ್ರ ನಾಯಕ್ ಅಭಿನಂದನಾ ನುಡಿಗಳನಾಡಿದರು,
ಅಕಾಡೆಮಿಯ ಸದಸ್ಯ ಸಂಚಾಲಕ ಸತೀಶ್ ಅಡಪ ಸಂಕಬೈಲು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಾಗರಾಜ ಪದಕಣ್ಣಾಯ ವಂದಿಸಿದರು.

Leave a Reply

Your email address will not be published. Required fields are marked *