ಪಡುಬಿದ್ರಿ, ಜು.19: ಆಯುಷ್ ಫೆಡರೇಶನ್ ಆಫ್ ಇಂಡಿಯಾ (ರಿ.), ಉಡುಪಿ ಜಿಲ್ಲೆ ವತಿಯಿಂದ ವೈದ್ಯರ ದಿನಾಚರಣೆ, ಕುಟುಂಬೋತ್ಸವ ಹಾಗೂ “ವೈದ್ಯಶ್ರೀ-2026” ಸನ್ಮಾನ ಕಾರ್ಯಕ್ರಮವು ಜುಲೈ 19ರಂದು ಉಡುಪಿಯ ಹೋಟೆಲ್ ಓಷನ್ ಪರ್ಲ್‌ನ ಮಂಡವಿ ಟೈಮ್ಸ್ ಸ್ಕ್ವಾರ್‌ನ ಪೆಸಿಫಿಕ್-1 ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಆಯುರ್ವೇದ ಪದ್ಧತಿಗೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದ್ದು, ಜನರ ಆರೋಗ್ಯ ರಕ್ಷಣೆಗೆ ಹಗಲಿರುಳು ಶ್ರಮಿಸುವ ಆಯುರ್ವೇದ ವೈದ್ಯರ ಸೇವೆ ಅನನ್ಯವಾಗಿದೆ. ವೈದ್ಯರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು, ಶಾಸಕರಾಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಜನ್ಮ ನೀಡುವ ಶಕ್ತಿ ತಾಯಿಗಿದ್ದರೆ, ಮರುಜನ್ಮ ನೀಡುವ ಶಕ್ತಿ ವೈದ್ಯರಿಗಿದೆ. ಆ ಶಕ್ತಿಯನ್ನು ದೇವರು ವೈದ್ಯರಿಗೆ ನೀಡಿದ್ದು, ಜೀವನವನ್ನು ಸುಸೂತ್ರವಾಗಿ ಸಾಗಿಸಲು ಕೆಲವು ಮೂಲಭೂತ ಮೌಲ್ಯಗಳನ್ನು ಪಾಲಿಸುವುದು ಅಗತ್ಯ ಎಂದು ಹೇಳಿದರು.
ಆಯುಷ್ ಫೆಡರೇಶನ್ ಆಫ್ ಇಂಡಿಯಾ (ರಿ.) ಉಡುಪಿ ಜಿಲ್ಲಾಧ್ಯಕ್ಷ ಡಾ. ಎನ್.ಟಿ. ಅಂಚನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ವೈದ್ಯರು ಸಂಘಟನೆಯಲ್ಲಿ ಸೇರ್ಪಡೆಗೊಂಡು ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು. ಇದರಿಂದ ವೈದ್ಯರ ಸಮಸ್ಯೆಗಳಿಗೆ ಸಮರ್ಥ ಪರಿಹಾರ ಕಂಡುಕೊಳ್ಳಲು ಹಾಗೂ ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಿರಂತರ ವೈದ್ಯಕೀಯ ಸೇವೆ ಸಲ್ಲಿಸಿರುವ ಹಿರಿಯ ವೈದ್ಯರಾದ ಡಾ. ರಾಮದಾಸ್ ಹೆಗ್ಡೆ (ಬಜಗೋಳಿ), ಡಾ. ವಿನಯ ನರೇಶ್ (ಕುಂದಾಪುರ) ಹಾಗೂ ಡಾ. ಸಿ.ಜಿ. ರಮೇಶ್ (ಹಂಗಾರಕಟ್ಟೆ, ಉಡುಪಿ) ಅವರನ್ನು “ವೈದ್ಯಶ್ರೀ-2026” ಪ್ರಶಸ್ತಿ ನೀಡಿ, ಗೌರವಿಸಿ ಸನ್ಮಾನಿಸಲಾಯಿತು. ವೈದ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಮನೋರಂಜನಾ ವಿಭಾಗದಲ್ಲಿ ಪ್ರಸಿದ್ಧ ಜಾದೂಗಾರ ಕುದ್ರೋಳಿ ಗಣೇಶ್ ಅವರ ಜಾದೂ ಪ್ರದರ್ಶನ ವಿಶೇಷ ಆಕರ್ಷಣೆಯಾಯಿತು.

ಗೌರವ ಅತಿಥಿಗಳಾಗಿ ಧಾರವಾಡ ಎಎಫ್ಐ ಘಟಕದ ಡಾ.ರವೀಂದ್ರ, ಸುಹಾಸಂ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ಶೆಣೈ, ಸ್ವದೇಶಿ ಔಷಧ ಭಂಡಾರ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಮನೋಜ್ ಪ್ರಭು ಹಾಗೂ ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್, ಉಡುಪಿ ಸಂಸ್ಥೆಯ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲೆ ಹಾಗೂ ತಾಲೂಕು ಮಟ್ಟದ ಎಲ್ಲಾ ಪದಾಧಿಕಾರಿಗಳ ಸಮನ್ವಯ ಮತ್ತು ಸಂಘಟಿತ ಪ್ರಯತ್ನದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಜಿಲ್ಲಾಧ್ಯಕ್ಷ ಡಾ. ಎನ್.ಟಿ. ಅಂಚನ್, ಕಾರ್ಯದರ್ಶಿ ಡಾ. ಸತೀಶ್ ರಾವ್ ಅವರ ನೇತೃತ್ವದಲ್ಲಿ ಉಡುಪಿ ತಾಲೂಕು ಅಧ್ಯಕ್ಷ ಡಾ. ಮನೋಜ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಡಾ. ಸಂದೀಪ್ ಸನಿಲ್, ಕಾರ್ಕಳ ತಾಲೂಕು ಅಧ್ಯಕ್ಷ ಡಾ. ಪ್ರಮೋದ್ ಕುಮಾರ್ ಹೆಗ್ಡೆ, ಕಾರ್ಯದರ್ಶಿ ಡಾ. ನಂದಾ ಜೆ. ಪೈ, ಕುಂದಾಪುರ ತಾಲೂಕು ಅಧ್ಯಕ್ಷ ಡಾ. ರವೀಂದ್ರ, ಕಾರ್ಯದರ್ಶಿ ಡಾ. ರಾಜೇಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಯಶಸ್ಸಿಗೆ ಪ್ರಮುಖ ಪಾತ್ರವಹಿಸಿದರು.
ಡಾ. ರವಿರಾಜ್ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಡಾ. ಸತೀಶ್ ರಾವ್ ವಂದನಾರ್ಪಣೆ ಸಲ್ಲಿಸಿದರು.

