×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕೋಟ ಕರಾವಳಿ ಮೊಗವೀರ ಮಹಾಜನ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ: ಸಮಾಜ ಸೇವೆಯೇ ಪರಮೋಚ್ಚ ಧರ್ಮ – ಡಾ. ಜಿ. ಶಂಕರ್

ಕೋಟ: ಮೊಗವೀರ ಸಮುದಾಯದ ಪ್ರತಿಯೊಬ್ಬರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಮುದಾಯದ ಅಭಿವೃದ್ಧಿಯೊಂದಿಗೆ ವೈಯಕ್ತಿಕವಾಗಿಯೂ ಉನ್ನತ ಮಟ್ಟಕ್ಕೆ ಬೆಳೆದು, ಸಮಾಜದ ಆಸ್ತಿಯಾಗಿ ಹೊರಹೊಮ್ಮಬೇಕು. ಸಮಾಜ ಕಟ್ಟುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಕರಾವಳಿ ಮೊಗವೀರ ಮಹಾಜನ ಸಂಘದ ಪ್ರಧಾನ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಅಭಿಪ್ರಾಯಪಟ್ಟರು.

ಶನಿವಾರ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಕರಾವಳಿ ಮೊಗವೀರ ಸಭಾಭವನದಲ್ಲಿ ನಡೆದ ಕರಾವಳಿ ಮೊಗವೀರ ಮಹಾಜನ ಸಂಘ ಕೋಟ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ, ವಿದ್ಯಾರ್ಥಿವೇತನ ವಿತರಣೆ, ಗುರಿಕಾರರಿಗೆ ಗೌರವಧನ ಹಾಗೂ ವೈದ್ಯಕೀಯ ನೆರವು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋಟ ಮೊಗವೀರ ಮಹಾಜನ ಸಂಘವು ಸಮುದಾಯದ ಅಭಿವೃದ್ಧಿ ಹಾಗೂ ಬಡವರ ಕಲ್ಯಾಣಕ್ಕಾಗಿ ಶ್ರಮಿಸುವ ಶಕ್ತಿ ಕೇಂದ್ರವಾಗಿ ರೂಪುಗೊಳ್ಳಬೇಕು. ಮೊಗವೀರ ಸಮುದಾಯದವರು ಶಿಕ್ಷಣ, ಉದ್ಯೋಗ, ಉದ್ಯಮ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿ ಗುರುತಿಸಿಕೊಳ್ಳಬೇಕು. ಸಮುದಾಯದ ಏಳಿಗೆಯ ಜತೆಗೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾವಳಿ ಮೊಗವೀರ ಮಹಾಜನ ಸಂಘದ ನೂತನ ಅಧ್ಯಕ್ಷ ಶಿವರಾಂ ಕೆ.ಎಂ. ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಮೊಗವೀರ ಸಮುದಾಯದ ಗುರಿಕಾರರಿಗೆ ಗೌರವಧನ ವಿತರಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಆರ್ಥಿಕವಾಗಿ ಅಶಕ್ತರಾಗಿರುವವರಿಗೆ ವೈದ್ಯಕೀಯ ನೆರವನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಸಂಘದ ವತಿಯಿಂದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ರ‍್ಯಾಂಕ್ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು.

ಪದಪ್ರದಾನ ಸಮಾರಂಭದ ಅಂಗವಾಗಿ ನೂತನ ಅಧ್ಯಕ್ಷ ಶಿವರಾಂ ಕೆ.ಎಂ. ಅವರಿಗೆ ಪ್ರಸ್ತುತ ಅಧ್ಯಕ್ಷ ನಾಡೋಜ ಡಾ. ಜಿ. ಶಂಕರ್ ಪುಷ್ಪಗುಚ್ಛ ನೀಡಿ ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿದರು. ನೂತನ ಕಾರ್ಯದರ್ಶಿ, ಕೋಶಾಧಿಕಾರಿ, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಗೌರವ ಸಲಹೆಗಾರರನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.

ಕರಾವಳಿ ಮೊಗವೀರ ಸಭಾಭವನದ ಪಾಕತಜ್ಞ ಶೀನ ಕುಲಾಲ್, ರಮೇಶ್ ಹೇರ್ಳೆ ಹಾಗೂ ಸಭಾಂಗಣದ ನಿರ್ವಹಣೆಯಲ್ಲಿ ಸೇವೆ ಸಲ್ಲಿಸಿದ ರಾಮ ಬಂಗೇರ ಪಡುಕರೆ ಅವರನ್ನು ಸನ್ಮಾನಿಸಲಾಯಿತು.
ಪ್ರಸ್ತುತ ಅಧ್ಯಕ್ಷ ಆನಂದ್ ಸಿ. ಕುಂದರ್ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಬಾರ್ಕೂರು ಮೊಗವೀರ ಸಂಯುಕ್ತ ಮಹಾಸಭಾದ ಅಧ್ಯಕ್ಷ ಸತೀಶ್ ಅಮೀನ್, ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಉದಯ ಹಟ್ಟಿಯಂಗಡಿ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ರವೀಶ್ ಶ್ರೀಯಾನ್, ಕೋಟ ಘಟಕದ ಅಧ್ಯಕ್ಷ ಸತೀಶ್ ತಿಂಗಳಾಯ, ಸಾಲಿಗ್ರಾಮ ಘಟಕದ ಅಧ್ಯಕ್ಷ ಕಿರಣ್ ಕುಂದರ್, ಮನಸ್ಮಿತ ಫೌಂಡೇಶನ್‌ನ ಪ್ರವರ್ತಕ ಡಾ. ಪ್ರಕಾಶ್ ಸಿ. ತೋಳಾರ್, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ಉದ್ಯಮಿ ಗಣೇಶ್ ಪ್ರಸಾದ್ ಕಾಂಚನ್, ಮಹಾಜನ ಸಂಘದ ಕಾರ್ಯದರ್ಶಿ ಚಂದ್ರ ಬಂಗೇರ, ಕೋಶಾಧಿಕಾರಿ ಸತೀಶ್ ಮರಕಾಲ ಹಾಗೂ ನೂತನ ಕೋಶಾಧಿಕಾರಿ ಜಗನಾಥ ಬಂಗೇರ ಉಪಸ್ಥಿತರಿದ್ದರು.

ಸಂಘದ ರಾಜು ಕರಾವಳಿ ಕಾರ್ಯಕ್ರಮ ನಿರೂಪಿಸಿದರು. ಗುರಿಕಾರರ ಪಟ್ಟಿಯನ್ನು ಕೃಷ್ಣಮೂರ್ತಿ ಮರಕಾಲ ವಾಚಿಸಿದರು. ಮೊಗವೀರ ಯುವ ಸಂಘ ಕೋಟ ಘಟಕದ ಮಾಜಿ ಅಧ್ಯಕ್ಷ ರಂಜೀತ್ ಕುಮಾರ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಸುರೇಶ್ ಕೆ. ವಂದಿಸಿದರು. ಕೋಡಿ ರಾಘವೇಂದ್ರ ಕರ್ಕೇರ ಸಹಕರಿಸಿದರು.4

Leave a Reply

Your email address will not be published. Required fields are marked *