ಶಿರ್ವದಲ್ಲಿ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಹೆಜ್ಜೆಗೊಂದು ಆಸರೆಯಾಗುವ ನಿಟ್ಟಿನಲ್ಲಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆಯು ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, “ಶಿರ್ವಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ಇಲ್ಲಿನ ಅನೇಕರು ವಿದೇಶಗಳಲ್ಲಿ ನೆಲೆಸಿದ್ದು, ದುಡಿಯುವ ಮೂಲಕ ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿದ್ದಾರೆ. ಹೀಗಾಗಿ, ತಮ್ಮ ಹಣಕಾಸಿನ ವ್ಯವಹಾರಗಳಿಗೆ ಭದ್ರತೆ ಒದಗಿಸುವ ವಿಶ್ವಾಸಾರ್ಹ ಬ್ಯಾಂಕಿಂಗ್ ಸಂಸ್ಥೆಯ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಶಿರ್ವದಲ್ಲಿ ನೂತನ ಶಾಖೆಯನ್ನು ಆರಂಭಿಸಿರುವುದು ಸಂತಸದ ಸಂಗತಿ. ಈ ಶಾಖೆಯ ಉದ್ಘಾಟನೆಗೆ ಆಗಮಿಸಿ ಚಾಲನೆ ನೀಡಿರುವುದು ನನ್ನ ಸೌಭಾಗ್ಯ,” ಎಂದರು.
“ಒಂದು ಕಾಲದಲ್ಲಿ ನಮ್ಮ ಬದುಕಿನ ಪರಿಸ್ಥಿತಿ ಇಂದಿಗಿಂತ ಭಿನ್ನವಾಗಿತ್ತು. ಆದರೆ, ಇಂದು ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಹಿಂದೆ ಉಳಿತಾಯ ಮಾಡುವ ವಿಧಾನಗಳೇ ವಿಭಿನ್ನವಾಗಿದ್ದವು. ನಾನು ಚಿಕ್ಕವನಿದ್ದಾಗ ನನ್ನ ಅಜ್ಜಿ ಮಡಿಕೆಯಲ್ಲಿ ಹಣವನ್ನು ಕೂಡಿಡುತ್ತಿದ್ದರು. ಎಂಟಾಣೆ ಇದ್ದರೆ ಒಂದು ಡಬ್ಬದಲ್ಲಿ, ಒಂದು ರೂಪಾಯಿ ಇದ್ದರೆ ಮತ್ತೊಂದು ಡಬ್ಬದಲ್ಲಿ ಹಾಕಿ ಉಳಿತಾಯ ಮಾಡುತ್ತಿದ್ದ ಕಾಲವದು. ಆದರೆ, ಇಂದು ಕಾಲ ಬದಲಾಗಿದೆ. ಯಾಂತ್ರೀಕೃತ ಬದುಕಿನೊಂದಿಗೆ ಅಂಗೈಯಲ್ಲೇ ಜಗತ್ತನ್ನು ಕಾಣುವಷ್ಟು ತಂತ್ರಜ್ಞಾನ ಬೆಳೆದಿದೆ,” ಎಂದು ಅವರು ಹೇಳಿದರು.

“ಒಂದು ಸಂಸ್ಥೆಯನ್ನು ಆರಂಭಿಸುವುದು ಎಷ್ಟು ಮುಖ್ಯವೋ, ಅದನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗುವುದು ಮತ್ತು ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯ. ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆಯು ಜನರ ವಿಶ್ವಾಸ ಗಳಿಸಿ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಸಮಾಜದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಲಿ,” ಎಂದು ಶುಭ ಹಾರೈಸಿದರು.
ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ. ಫಾ. ಚಾರ್ಲ್ಸ್ ಮಿನೇಜಸ್ ಆಶೀರ್ವಚನ ನೀಡಿದರು. ಉಡುಪಿಯ ಕುಂಜಿಬೆಟ್ಟುವಿನಲ್ಲಿ ಪ್ರಧಾನ ಕಚೇರಿ ಹಾಗೂ ಪ್ರಥಮ ಶಾಖೆಯನ್ನು ಹೊಂದಿರುವ ಸೊಸೈಟಿಯು ಮೂರು ವರ್ಷಗಳ ಹಿಂದೆ ಕಾರ್ಯಾರಂಭಿಸಿದ್ದು, ಅಲ್ಪಾವಧಿಯಲ್ಲೇ ಪ್ರಗತಿ ಸಾಧಿಸಿದೆ. ನಿರ್ದೇಶಕ ಮಂಡಳಿಯ ಮಾರ್ಗದರ್ಶನ, ಸಿಬ್ಬಂದಿಗಳ ನಿರಂತರ ಪ್ರಯತ್ನ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೀವನ್ ಡಿಸೋಜಾ ಅವರ ಸಹಕಾರಿ ಕ್ಷೇತ್ರದ ಅನುಭವ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಗ್ರಾಹಕರ ವಿಶ್ವಾಸ ಗಳಿಸಿರುವ ಸೊಸೈಟಿಯು ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಮುಂದಿನ ಶಾಖೆಯನ್ನು ನವೆಂಬರ್‌ನಲ್ಲಿ ಪೆರಂಪಳ್ಳಿಯಲ್ಲಿ ಆರಂಭಿಸಲು ಉದ್ದೇಶಿಸಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋ-ಆಪರೇಟಿವ್, ಬೆಂಗಳೂರು ಇದರ ನಿರ್ದೇಶಕ ಮಂಜುನಾಥ್ ಎಸ್.ಕೆ., ಕೇರಳದ ಪೊಟ್ಟ ಡಿವೈನ್ ರಿಟ್ರೀಟ್ ಸೆಂಟರ್‌ನ ಧರ್ಮಗುರು ಫಾ. ರಿಚರ್ಡ್ ಕ್ವಾಡ್ರಸ್, ಉಡುಪಿ ಜಿಲ್ಲಾ ಸೌಹಾರ್ದ ಕೋ-ಆಪರೇಟಿವ್ ಯೂನಿಯನ್ ಅಧ್ಯಕ್ಷ ಪಿ. ಜಗನ್ನಾಥ ಶೆಟ್ಟಿ, ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಮೆಲ್ವಿನ್ ಅರಾನ್ನ, ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್‌ನ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್. ಹಾಗೂ ಸೊಸೈಟಿಯ ಅಧ್ಯಕ್ಷೆ ಜೆಸಿಂತಾ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸೊಸೈಟಿಯ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೀವನ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಟೀವನ್ ಕೊಲಾಸೋ ಕಾರ್ಯಕ್ರಮ ನಿರೂಪಿಸಿದರು.

