×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಸ್ನೇಹ ಸಮಾವೇಶ: ‘ಮಾನವ ರತ್ನ’ ಪ್ರಶಸ್ತಿ ಪ್ರಧಾನ

ಉಡುಪಿಯ ಮಿಷನ್ ಕಂಪೌಂಡ್‌ನಲ್ಲಿರುವ ಯುಬಿಎಂಸಿ ಆಡಿಟೋರಿಯಂನಲ್ಲಿ ಶನಿವಾರ ಸೌಹಾರ್ದತೆಯ ಸಂಕೇತವಾಗಿ ವಿಶೇಷ ಕಾರ್ಯಕ್ರಮ ನಡೆಯಿತು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಸ್ನೇಹ ಸಮಾವೇಶದಲ್ಲಿ ಸಮಾಜದ ವಿಶಿಷ್ಟ ಸಾಧನೆ ಮತ್ತು ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ‘ಮಾನವ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರಸ್ತುತ ಭಾರತ ಪರಿಸ್ಥಿತಿಯು ವೇದಿಕೆಯಲ್ಲಿ ನಿಂತು ಭಾಷಣ ಮಾಡುವ ಪರ್ವ ಅಲ್ಲ. ಇದು ಪ್ರತಿಭಟನೆಗಳ ಪರ್ವ. ಬೀದಿಗೆ ಇಳಿದು ಸಂವಿಂಧಾನ ಹಾಗೂ ಮಾನವೀಯ ಮೌಲ್ಯಗಳನ್ನು ಕಾಪಾಡುವ ಹೋರಾಟ ಮಾಡಬೇಕಾದ ಪರ್ವ. ಇದು ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮ. ನಾವೆಲ್ಲ ಸಹನೆ, ಬದ್ಧತೆಯಿಂದ ಬೀದಿಗೆ ಇಳಿದು ಹೋರಾಟ ಮಾಡಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ, ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿ ಮಿಷನ್ ಕಂಪೌಂಡ್‌ನ ಯುಬಿಎಂಸಿ ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸಲಾದ ಸ್ನೇಹ ಸಮಾವೇಶದಲ್ಲಿ ʼಮಾನವ ರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತಿದ್ದರು.

ದೇಶದ ಪರಿಸ್ಥಿತಿಯಲ್ಲಿ ಹಾಳು ಕೆಡವಿರುವ ಬಗ್ಗೆ ಜನರಿಗೆ ಸಹನೆಯಿಂದ ಅರ್ಥ ಮಾಡಿಸಬೇಕು. ಇವರ ಆಡಳಿತದಲ್ಲಿ ಕರಾವಳಿ ಕೆಟ್ಟಿದೆ, ಆರ್ಥಿಕತೆ ಕುಸಿದೆ ಹಾಗೂ ಯುವಕರ ಭವಿಷ್ಯ ಹಾಳಾಗಿದೆ. ಈ ಅಂಕಿ ಅಂಶಗಳನ್ನು ಇಟ್ಟು ಕೊಂಡು ಹೋರಾಟ ಮಾಡಬೇಕಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆ ಜಿಲ್ಲೆಗಳಿಗೆ ತೆರಳಿ ಈ ಕಾರ್ಯ ಮಾಡಬೇಕು. ನಮಗೆ ಈಗ ರಾಜಕೀಯ ಪಕ್ಷಗಿಂತ ಜನಪರ ಮಾತನಾಡುವ ಧ್ವನಿಗಳ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.

ಅಂಬೇಡ್ಕರ್ ಅವರ ಸಂವಿಧಾನವನ್ನು ನಾಶ ಮಾಡಲು ಪ್ರಯತ್ನ ಯಾರು ಮಾಡುತ್ತಿದ್ದಾರೆ ಎಂಬುದನ್ನು ಅರ್ಥ ಮಾಡುವ ಮೊದಲು ನಾವು ಅಂಬೇಡ್ಕರ್ ಯಾಕೆ ಸಂವಿಧಾನ ಬರೆದರು ಎಂಬುದನ್ನು ತಿಳಿದುಕೊಳ್ಳಬೇಕು. ಅಂಬೇಡ್ಕರ್ ಸಂವಿಧಾನ ಬರೆದಿರುವುದು ಬ್ರಿಟಿಷರ ಆಳ್ವಿಕೆ ಸ್ವಾತಂತ್ರಗೊಂಡ ಭಾರತಕ್ಕೆ ಅಲ್ಲ. ಸ್ವಾತಂತ್ರ್ಯ ಪಡೆದ ಹೊಸ ಭಾರತ ಮತ್ತೆ ದಬ್ಬಾಳಿಕೆ ನಡೆಸುವ ಮನುಸ್ಮತಿಗಳ ಕೈಗೆ ಹೋಗಬಾರದು ಎಂಬ ಕಾರಣಕ್ಕೆ ಸಂವಿಧಾನ ಬರೆದರು. ಇಂದು ಆ ಸಂವಿಧಾನವನ್ನು ಒಡೆಯುವ ಪ್ರಯತ್ನ ಇಂದು ನಡೆಯುತ್ತಿದೆ ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಮಾತನಾಡಿ, ದೇಶದಲ್ಲಿ ಕೇಂದ್ರ ಸರಕಾರ ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿ ಹೊಸ ಹೊಸ ಕಾನೂನು ತರುತ್ತಿದೆ. ದೇಶದ ಜನರ ಬದುಕನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಜವಾಬ್ದಾರಿಯಿಂದ ಈ ಸರಕಾರ ನುಣುಚಿಕೊಳ್ಳುತ್ತಿದೆ. ದೇಶದ ಅಲ್ಪಸಂಖ್ಯಾತರಿಗೆ ನಿರಂತರ ತೊಂದರೆ, ಕಿರುಕುಳ ನೀಡುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಿದರೆ ದೇಶದ್ರೋಹಿಯ ಪಟ್ಟ ಕಟ್ಟಲಾಗುತ್ತಿದೆ ಎಂದು ಆರೋಪಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಾತನಾಡಿ, ಜಗತ್ತಿನ ಬಹುತೇಕ ದೇಶದಲ್ಲಿ ಅಲ್ಪಸಂಖ್ಯಾತರು, ಮೂಲನಿವಾಸಿಗಳು ನಿರಂತರವಾಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಪ್ರತಿನಿತ್ಯವೂ ಹೋರಾಟದಿಂದಲೇ ಅಸ್ತಿತ್ವವನ್ನು ತೋರ್ಪಡಿಸುವ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಲ್ಪಸಂಖ್ಯಾತರು ಸರಕಾರಿ ಸೌಲಭ್ಯಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಲೆ ತಮ್ಮಲ್ಲಿ ಆಂತರಿಕ ಬದಲಾವಣೆ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಕಾರ್ಯ ಮಾಡಬೇಕು. ಇದರಿಂದ ಸರಿ ಸಮಾನ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ವಹಿಸಿದ್ದರು. ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದ ಸಂಚಾಲಕ ಮುಹಮ್ಮದ್ ಯಾಸೀನ್ ಮಲ್ಪೆ ಆಶಯ ಮತ್ತು ಅಭಿನಂದನಾ ಭಾಷಣ ಮಾಡಿದರು.

ಅತಿಥಿಗಳಾಗಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಜಿಲ್ಲಾ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗರ್ಫೂ, ಉಡುಪಿ ಜಿಲ್ಲಾ ವೆರ್ಲ್ಫೇ ಫೋರಮ್ ಯುಎಇ ಇದರ ಎಂ.ಇ.ಮುಳೂರು, ಉದ್ಯಮಿ ಕರುಣಾಕರ ಶೆಟ್ಟಿ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷ ದಿವಾಕರ ಸನಿಲ್, ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು, ಉಡುಪಿ ಸಹಬಾಳ್ವೆ ಸಂಚಾಲಕ ಪ್ರೊ.ಫಣಿರಾಜ್, ಸಾಮಾಜಿಕ ಹೊರಾಟಗಾರ ಕೆ.ಎಲ್.ಅಶೋಕ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್‌ ಮಾಸ್ತರ್‌ , ಎಸ್ ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾರ್ಗ, ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಕೆ.ಅಶ್ರಫ್, ತೀರ್ಥಹಳ್ಳಿ ಮುಸ್ಲಿಂ ಒಕ್ಕೂಟದ ಹಾಜಿ ಸುಲೈಮಾನ್ ಸಾಹೇಬ್, ನಾರ್ತ್ ಕೆನರಾ ಮುಸ್ಲಿಂ ಯುನೈಟೆಡ್ ಫೋರಂನ ಇಮ್ತಿಯಾಝ್ ಅಹ್ಮದ್ ಉರ್ಮ ಶೇಖ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಒಕ್ಕೂಟದ ಹಿರಿಯ ಉಪಾಧ್ಯಕ್ಷ ಮುಹಮ್ಮದ್, ಒಕ್ಕೂಟದ ಮಾಜಿ ಅಧ್ಯಕ್ಷರಾದ ಅಶ್ಫಾಕ್ ಅಹಮದ್ ಕಾರ್ಕಳ, ಇಬ್ರಾಹಿಂ ಸಾಹೇಬ್ ಕೋಟ, ತಾಲೂಕು ಅಧ್ಯಕ್ಷರುಗಳಾದ ಎಸ್‌ಎಂ ಇರ್ಶಾದ್ ನೇರ್ಜಾ, ಎಸ.ದಸ್ತಗಿರಿ ಕಂಡ್ಲೂರು, ಮುಹಮ್ಮದ್ ಗೌಸ್ ಮಿಯಾರು, ನರ್ಸೀ ಅಹ್ಮದ್, ತಾಜುದ್ದೀನ್ ಇಬ್ರಾಹಿಂ, ಶಮ್ಸ್ ತಬ್ರೇಝ್ ನಾಗೂರು ಉಪಸ್ಥಿತರಿದ್ದರು.

ಹಾಫಿಝ್ ಅಬ್ದುಲ್ ರಹ್ಮಾನ್ ಅಶ್ರಫ್ ಕುರಾನ್ ಪಠಿಸಿದರು. ಕಾರ್ಯಕ್ರಮದ ಸಂಚಾಲಕ ಮೌಲಾನ ಝಮೀರ್‌ ಅಹ್ಮದ್ ರಶಾದಿ ಸ್ವಾಗತಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ ವಂದಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

ಸಮಾವೇಶದಲ್ಲಿ ಸಚಿವ ರಿಝ್ವಾನ್ ಅರ್ಷದ್, ನಟ ಪ್ರಕಾಶ್‌ ರಾಜ್ ಅವರಿಗೆ ಮಾನವ ರತ್ನ’, ದುಬೈಯ ಉದ್ಯಮಿ ಹಿದಾಯತುಲ್ಲಾ ಅಬ್ಬಾಸ್ ಅವರಿಗೆ ಸೇವಾ ರತ್ನ’, ಬರಹಗಾರ ಮತ್ತು ಸಾಮಾಜಿಕ ಹೋರಾಟಗಾರ ಸುರೇಶ್ ಭಟ್ ಬಾಕ್ರಬೈಲ್ ಅವರಿಗೆ ಸೌಹಾರ್ದ ರತ್ನ’ ಪ್ರಶಸ್ತಿಯನ್ನು ತಲಾ 50 ಸಾವಿರ ರೂ. ನಗದು ಪುರಸ್ಕಾರದೊಂದಿಗೆ ಪ್ರದಾನ ಮಾಡಿದರು.

ನಗದು ಪುರಸ್ಕಾರವನ್ನು ಪ್ರಕಾಶ್ ರಾಜ್ ಎಸ್‌ಐಆರ್ ಹೋರಾಟಕ್ಕಾಗಿ ಸಾಮಾಜಿಕ ಹೋರಾಟಗಾರ ಕೆ.ಎಲ್.ಅಶೋಕ್ ಅವರಿಗೆ ಮತ್ತು ಹಿದಾಯತುಲ್ಲಾ ಅಬ್ಬಾಸ್ ಹೂಡೆಯ ಸರಕಾರಿ ಶಾಲೆಗಾಗಿ ಉಸ್ತಾದ್ ಸಾದಿಕ್ ಅವರಿಗೆ ಹಸ್ತಾಂತರಿಸಿದರು. ಅದೇ ರೀತಿ ಸುರೇಶ್ ಭಟ್ ವಾಪಾಸ್ಸು ನೀಡಿದ ನಗದನ್ನು ಒಕ್ಕೂಟದ ಅಧ್ಯಕ್ಷರು ಎಸ್‌ಆರ್ ಐ ಹೋರಾಟಕ್ಕಾಗಿ ಕೆ.ಎಲ್.ಅಶೋಕ್‌ಗೆ ಒಪ್ಪಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಮಾಜಿಕ ಕಾರ್ಯಕರ್ತರು ಗಳಾದ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ, ಬಿಪಿನ್ ಚಂದ್ರಪಾಲ್ ಕಾರ್ಕಳ, ಜೆರಾಲ್ಡ್ ಪಿಂಟೋ ಉಡುಪಿ, ಚಂದ್ರಶೇಖರ್ ಶೆಟ್ಟಿ ಕುಂದಾಪುರ, ಸಾಮಾಜಿಕ ಹೋರಾಟಗಾರ್ತಿ ಗೀತಾ ಸುರೇಶ್ ಕುಮಾರ್ ಬೈಂದೂರು, ಲೇಖಕಿ ಫಾತಿಮಾ ರಲಿಯಾ ಹೆಜಮಾಡಿ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *