×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೂತನ ಸ್ವಂತ ಕಚೇರಿ ಶುಭಾರಂಭ: ಯು.ಟಿ. ಖಾದರ್ ಉದ್ಘಾಟನೆ

ಉಡುಪಿ, ಅ.೪: ನಮ್ಮ ಸಮಾಜದ ದೊಡ್ಡ ಶಕ್ತಿ ಅಂದರೆ ಸಾಮರಸ್ಯದ ಬದುಕು ಮತ್ತು ಒಗ್ಗಟ್ಟಿನ ಸಮಾಜ. ಅದುವೇ ಸಮಾಜದ ದೊಡ್ಡ ಗೌರವದ ಸಂಕೇತವಾಗಿದೆ. ಸಾಮರಸ್ಯದ ಸಮಾಜ ಕಟ್ಟುವುದು ಇಂದಿನ ಅತೀ ಅಗತ್ಯ ವಾಗಿದೆ. ಆ ಕಾರ್ಯವನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮುಖ್ಯ ಧ್ಯೇಯವಾಗಿ ಮಾಡಬೇಕಾಗಿದೆಂದು ರಾಜ್ಯ ವಕ್ಫ್, ಹಜ್, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಆರೋಗ್ಯ ಸಚಿವ ಯು.ಟಿ.ಖಾರ್ದ ಹೇಳಿದ್ದಾರೆ.
೨೫ ವರ್ಷಗಳನ್ನು ಪೂರೈಸಿ ರಜತ ಸಂಭ್ರಮದಲ್ಲಿರುವ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೂತನ ಸ್ವಂತ ಕಚೇರಿಯನ್ನು ರವಿವಾರ ಉಡುಪಿ ನಗರದ ಹೃದಯ ಭಾಗದಲ್ಲಿರುವ ವಿ.ಕೆ.ಪ್ಯಾರಡೈಸ್ ಕಟ್ಟಡದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಾವು ಕಮ್ಯುನಿಟಿಗೆ ಸಹಾಯ ಮಾಡಬೇಕೆ ಹೊರತು ಕಮ್ಯುನಲ್ ಆಗ ಬಾರದು. ಧಾರ್ಮಿಕ ನಂಬಿಕೆ ನಮ್ಮ ಮಣ್ಣಿನ ಶಕ್ತಿಯೇ ಹೊರತು ದೌರ್ಬಲ್ಯ ಅಲ್ಲ. ಪ್ರತಿಯೊಂದು ಧರ್ಮಗಳ ಸಂದೇಶವನ್ನು ಮೈಗೂಡಿಸಿಕೊಂಡು ಇನ್ನೊಬ್ಬರ ಧರ್ಮವನು ್ನಗೌರವಿಸಿ, ಅವರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಮೊದಲ ಆದ್ಯತೆ ಆಗಬೇಕು. ಆ ರೀತಿಯ ಸಮಾಜ ನಿರ್ಮಿಸುವ ಜವಾಬ್ದಾರಿಯನ್ನು ಮುಸ್ಲಿಮ್ ಒಕ್ಕೂಟ ವಹಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್‌ಮಾತನಾಡಿ, ಸಮುದಾಯದಲ್ಲಿನ ಒಗ್ಗಟ್ಟು ನಮ್ಮ ದೊಡ್ಡ ಶಕ್ತಿಯಾಗಿದೆ. ಪ್ರೀತಿಯ ಮೂಲಕ ಸಮಾಜವನ್ನು ಕಟ್ಟುವ ಕಾರ್ಯವನ್ನು ನಾವೆಲ್ಲ ಮಾಡಬೇಕಾಗಿದೆ. ಒಕ್ಕೂಟವು ಸಮುದಾಯದ ಏಕತೆಯೊಂದಿಗೆ ಇತರ ಸಮುದಾಯಗಳ ಜೊತೆ ಸೌಹಾರ್ದತೆ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.


ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದ ಸಂಚಾಲಕ ಸುಹೇಲ್ ಅಹ್ಮದ್ ಮರೂರು ಮಾತನಾಡಿ, ಇಂದು ಸೌಹಾರ್ದ ಸಮಾಜ ಕಟ್ಟುವಲ್ಲಿ ಒಕ್ಕೂಟವು ಬಹಳ ದೊಡ್ಡ ಪಾತ್ರ ವಹಿಸಿದೆ. ಈ ವಿಚಾರದಲ್ಲಿ ಒಕ್ಕೂಟವು ಇಡೀ ಸಮಾಜಕ್ಕೆ ಮಾದರಿಯಾಗಿದೆ. ಸಮುದಾಯವನ್ನು ಒಗ್ಗೂಡಿಸುವಲ್ಲಿ ಒಕ್ಕೂಟದ ಶ್ರಮ ಅಪಾರ. ನಮ್ಮ ಭಾರತ ಜಾತ್ಯತೀತ, ಸೌಹಾರ್ದ ದೇಶವಾಗಿ ಉಳಿಯಬೇಕಾದರೆ ಇಂತಹ ನೂರಾರು ಒಕ್ಕೂಟಗಳು ಹುಟ್ಟಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಒಕ್ಕೂಟದ ಸ್ವಂತ ಕಚೇರಿಯು ನಮ್ಮ ಸಮುದಾಯದ ಒಗ್ಗಟ್ಟು, ವಿಶ್ವಾಸ ಮತ್ತು ಭವಿಷ್ಯದ ಮೇಲಿನ ನಮ್ಮ ಬದ್ಧತೆಯ ಪ್ರತೀಕವಾಗಿದೆ. ಮುಂದೆ ಜಿಲ್ಲೆಯ ಪ್ರತಿಭಾವಂತ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಸಿವಿಲ್ ಸರ್ವಿಸ್ ಪರೀಕ್ಷೆಗಳ ತರಬೇತಿ ಹಾಗೂ ಕೋಚಿಂಗ್ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಯಾಸೀನ್ ಮಲ್ಪೆ ಸಮಾರೋಪ ಭಾಷಣ ಮಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲು ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂಬುದು ನಮ್ಮ ಮುಖ್ಯವಾದ ಬೇಡಿಕೆಯಾಗಿದೆ. ಇದನ್ನು ಮುಂದಿನ ಚುನಾವಣೆ ಬರುವ ಮೊದಲು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಭಟ್ಕಳ ಮಜ್ಲಿಸ್ ಇ ಇಸ್ಲಾಹ್ ಓ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಯುದ್ದೀನ್ ಕುದ್ರೋಳಿ, ಸಹಬಾಳ್ವೆ ಕುಂದಾಪುರ ತಾಲೂಕು ಸಂಚಾಲಕ ರಾಮಕೃಷ್ಣ ಹೆರ್ಳೆ, ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಮಾತನಾಡಿದರು.
ಈ ಸಂದರ್ಭದಲ್ಲಿ ವಿಕೆ ಗ್ರೂಪ್ ಹಾಗೂ ಕಟ್ಟಡದ ಮಾಲಕ ಕರುಣಾಕರ ಎಂ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಮಾಜಿ ಅಧ್ಯಕ್ಷರಾದ ಹಾಜಿ ಅಬ್ದುಲ್ಲಾ ನಾವುಂದ, ಅಶ್ಫಕ್ ಕಾರ್ಕಳ, ಇಬ್ರಾಹಿಂ ಕೋಟ, ಹಿರಿಯ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಬಿಎಸ್ ಎಫ್ ಉಪಸ್ಥಿತರಿದ್ದರು.
ಉಡುಪಿ ಜಾಮೀಯ ಮಸೀದಿಯ ಖತೀಬ್ ಮೌಲಾನಾ ಅಬ್ದುಲ್ ರಶೀದ್ ಉಮರಿ ಕುರಾನ್ ಪಠಿಸಿದರು. ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ ವಂದಿಸಿದರು. ಎಸ್.ಮುನೀರ್ ಕಂಡ್ಲೂರು ಹಾಗೂ ಜಿ.ಎಂ.ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *