ಕಾಪು, ಸೆ.24: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಲೋಕಕಲ್ಯಾಣದ ಉದ್ದೇಶದಿಂದ ಆಯೋಜಿಸಿರುವ ‘ಕಾಪುವಿನ ಅಮ್ಮನಿಗೊಂದು ಅಕ್ಷರ ನಮನ’ ನವದುರ್ಗಾ ಲೇಖನ ಯಜ್ಞ ಮಹಾಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ದೇವಳದ ಪ್ರಧಾನ ತಂತ್ರಿ ಕೆ.ಪಿ. ಕುಮಾರಗುರು ತಂತ್ರಿ ಅವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ನೇತೃತ್ವದಲ್ಲಿ ದೀಪ ಪ್ರಜ್ವಲನೆ, ಮಾತೃಕಾ ಶಕ್ತಿ ಪೂಜೆ, ಸಾಮೂಹಿಕ ಪ್ರಾರ್ಥನೆ ಹಾಗೂ ಮಹಾಮಂಗಳಾರತಿ ನೆರವೇರಿತು.

ಎಂ.ಆರ್.ಜಿ. ಗ್ರೂಪ್ ಚೇರ್ಮನ್ ಡಾ. ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳುವುದು ಭಕ್ತರಿಗೆ ದೊರೆತ ಉತ್ತಮ ಅವಕಾಶವಾಗಿದ್ದು, ಇಂತಹ ಧಾರ್ಮಿಕ ಕಾರ್ಯಗಳು ಹಿಂದೂ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳ ಅರಿವು ಮೂಡಿಸಲು ಸಹಕಾರಿಯಾಗುತ್ತವೆ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕುಟುಂಬದ ಯಶಸ್ಸಿನಲ್ಲಿ ತಾಯಿ ಹಾಗೂ ಪತ್ನಿಯ ದೈವಭಕ್ತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಮಾರಿಗುಡಿ ಜೀರ್ಣೋದ್ಧಾರ ಕಾರ್ಯವು ವಿಶ್ವದಾದ್ಯಂತ ಗಮನ ಸೆಳೆದಿದ್ದು, ಕ್ಷೇತ್ರವನ್ನು ಧಾರ್ಮಿಕ ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ವಿವಿಧ ಸೇವಾ ಕಾರ್ಯಗಳನ್ನು ವಿಸ್ತರಿಸಲಾಗುತ್ತಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುರಸಭಾಧ್ಯಕ್ಷೆ ಮೋಹಿನಿ ಶೆಟ್ಟಿ ಸೇರಿದಂತೆ ಗಣ್ಯರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿ ಹಾಗೂ ಕಾಪು ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿಗಳು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.
ರಾಜರ್ಷಿ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿದರು. ಭಗವಾನ್ ದಾಸ್ ಕೆ. ಪ್ರಸ್ತಾವನೆಗೈದರು. ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅಭಿಯಾನದ ಕುರಿತು ಮಾಹಿತಿ ನೀಡಿದರು. ಯೋಗೀಶ್ ಶೆಟ್ಟಿ ಬಾಲಾಜಿ ವಂದಿಸಿದರು. ದಾಮೋದರ ಶರ್ಮ ಬಾರ್ಕೂರು ಹಾಗೂ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.

