ಪಡುಕುತ್ಯಾರು, ಆ. 6: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ–ಪಡುಕುತ್ಯಾರಿನಲ್ಲಿ ನಡೆಯುತ್ತಿರುವ ಪರಾಭವ ನಾಮ ಸಂವತ್ಸರದ 22ನೇ ವರ್ಷದ ಶ್ರೀ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಶ್ರೀ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸುವರ್ಣ ಜನ್ಮವರ್ಧಂತಿ ಮಹೋತ್ಸವವನ್ನು ಆಗಸ್ಟ್ 9, ಭಾನುವಾರ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಅತ್ಯಂತ ವೈಭವದಿಂದ ಆಚರಿಸಲಾಗುವುದು.
ಅಂದು ಬೆಳಿಗ್ಗೆ 5.30 ಗಂಟೆಯಿಂದ ಶ್ರೀ ಸರಸ್ವತೀ ಯಾಗಶಾಲೆಯಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹೋಮ, ಪೂರ್ಣಮಾನ ನವಗ್ರಹ ಹೋಮ, ಮಹಾಮೃತ್ಯುಂಜಯ ಹೋಮ, ಶ್ರೀ ರುದ್ರ ಹೋಮ ಹಾಗೂ ಶ್ರೀ ಧನ್ವಂತರಿ ಹೋಮ ಸೇರಿದಂತೆ ವೈದಿಕ ಮಹಾಯಜ್ಞಗಳು ನಡೆಯಲಿವೆ. ಶ್ರೀ ಸರಸ್ವತೀ ಮಾತೃ ಮಂಡಳಿ ಹಾಗೂ ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘದ ನೇತೃತ್ವದಲ್ಲಿ ಶ್ರೀ ಕನಕಧಾರಾ ಸ್ತೋತ್ರ ಹೋಮ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ಮತ್ತು ಶ್ರೀ ಲಕ್ಷ್ಮೀ ಶೋಭಾನೆ ಪಾರಾಯಣ ಜರುಗಲಿವೆ. ಬೆಳಿಗ್ಗೆ 8.30 ಗಂಟೆಗೆ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನೆರವೇರಲಿದೆ.
ಬೆಳಿಗ್ಗೆ 9.30 ಗಂಟೆಗೆ ಪಟ್ಟದ ದೇವರಾದ ಪೀಠಮಾತೆ ಶ್ರೀ ಸರಸ್ವತೀ ದೇವಿಯೊಂದಿಗೆ ಶ್ರೀ ಸರಸ್ವತೀ ಸತ್ಸಂಗ ಮಂದಿರಕ್ಕೆ ಆಗಮಿಸುವ ಪರಮಪೂಜ್ಯ ಜಗದ್ಗುರುಗಳವರನ್ನು ಸಂಪ್ರದಾಯಬದ್ಧವಾಗಿ ಸ್ವಾಗತಿಸಿ, ಸಮಸ್ತ ಶಿಷ್ಯವೃಂದದ ವತಿಯಿಂದ ತುಲಾಭಾರ ಮಹಾಸೇವೆ ನೆರವೇರಲಿದೆ.
ಬೆಳಿಗ್ಗೆ 10.30 ಗಂಟೆಗೆ ಸುವರ್ಣ ಜನ್ಮವರ್ಧಂತಿ ಅಂಗವಾಗಿ ಶಿಷ್ಯವೃಂದದ ವತಿಯಿಂದ ಪರಮಪೂಜ್ಯ ಜಗದ್ಗುರುಗಳಿಗೆ ರಜತಪೀಠ ಸಮರ್ಪಣೆ ಹಾಗೂ ಗೌರವಾರ್ಪಣೆ ನಡೆಯಲಿದ್ದು, ಮಹಾಸಂಸ್ಥಾನದ ವ್ಯಾಪ್ತಿಯ ವಿವಿಧ ದೇವಸ್ಥಾನಗಳ ಧರ್ಮದರ್ಶಿಗಳು ತಮ್ಮ ದೇವಸ್ಥಾನಗಳಲ್ಲಿ ಪರಮಪೂಜ್ಯ ಜಗದ್ಗುರುಗಳವರ ಹೆಸರಿನಲ್ಲಿ ನಡೆಸಿದ ವಿವಿಧ ಸೇವೆಗಳ ಪ್ರಸಾದವನ್ನು ಸಮರ್ಪಿಸಲಿದ್ದಾರೆ. ಬಳಿಕ ಶ್ರೀ ಗುರುಪಾದುಕಾ ಪೂಜೆ ನೆರವೇರಲಿದೆ.
ಮಧ್ಯಾಹ್ನ 1.00 ಗಂಟೆಗೆ ನಡೆಯುವ ಧರ್ಮಸಂಸತ್‌ನಲ್ಲಿ ಆಸ್ತಾನ ವಿದ್ವಾಂಸರಾದ ವಿದ್ವಾನ್ ಶ್ರೀ ಪಂಜ ಭಾಸ್ಕರ ಭಟ್, ಘನಪಾಠಿ ಶ್ರೀ ಬಾಲಚಂದ್ರ ಭಟ್ (ಚಂದುಕೂಡ್ಲು), ಜ್ಯೋತಿಷ್ಯ ವಿದ್ವಾನ್ ಶ್ರೀ ಉಮೇಶ್ ಆಚಾರ್ಯ (ಪಡೀಲು) ಹಾಗೂ ವೇದಬ್ರಹ್ಮಶ್ರೀ ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ್ ಪಂಡಿತ್ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ “ವಿಶ್ವಬ್ರಾಹ್ಮಣರ ಸಾಂಸ್ಕೃತಿಕ ಸಂಘಟನೆಗೆ ಪಂಚಪ್ರಬೋಧಗಳ ಜಾಗೃತಿ” ವಿಷಯದ ಕುರಿತು ವಿಶ್ವಕರ್ಮ ಸಹಕಾರ ಬ್ಯಾಂಕ್, ಮಂಗಳೂರು ಮಾರ್ಗದರ್ಶಕರಾದ ಡಾ. ಎಸ್. ಆರ್. ಹರೀಶ್ ಆಚಾರ್ಯ, ಜಲಕದಕಟ್ಟೆ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಅಧ್ಯಕ್ಷ ಶ್ರೀ ವಿ. ಶ್ರೀಧರ ಆಚಾರ್ಯ ವಡೆಯರ ಹೋಬಳಿ ವಹಿಸಲಿದ್ದು, ಗೌರವಾಧ್ಯಕ್ಷ ಶ್ರೀ ಪಿ. ವಿ. ಗಂಗಾಧರ ಆಚಾರ್ಯ, ಉಡುಪಿ ಉಪಸ್ಥಿತರಿರುವರು. ಮಹಾಸಂಸ್ಥಾನದ ವ್ಯಾಪ್ತಿಯ ಸಮಸ್ತ ದೇವಸ್ಥಾನಗಳ ಧರ್ಮದರ್ಶಿಗಳು, ಶಿಷ್ಯರು, ಭಕ್ತರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪರಮಪೂಜ್ಯ ಜಗದ್ಗುರುಗಳವರ ಸುವರ್ಣ ಜನ್ಮವರ್ಧಂತಿಯ ಈ ಅಪೂರ್ವ ಧಾರ್ಮಿಕ ಸಮಾರಂಭದಲ್ಲಿ ಸಮಸ್ತ ಶಿಷ್ಯವೃಂದ, ಭಕ್ತವೃಂದ ಹಾಗೂ ಸಾರ್ವಜನಿಕರು ಸಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳವರ ಪರಮಾನುಗ್ರಹಕ್ಕೆ ಪಾತ್ರರಾಗುವಂತೆ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯು ಪ್ರಕಟಣೆಯಲ್ಲಿ ಮನವಿ ಮಾಡಿದೆ.

