×
Our website is made possible by displaying online advertisements to our visitors. Please consider supporting us by whitelisting our website.
  • 9880645340

ರೋಟರಿ ಕ್ಲಬ್ ಕಟಪಾಡಿ ರಜತ ಮಹೋತ್ಸವ ಉದ್ಘಾಟನೆ – ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕಟಪಾಡಿ: “ರೋಟರಿ ಎಂದರೆ ಕೇವಲ ಸಭೆಗಳು ಮತ್ತು ಕಾರ್ಯಕ್ರಮಗಳ ಸಂಘಟನೆಯಲ್ಲ. ಅದು ಸಮಾಜದ ಅಗತ್ಯಗಳನ್ನು ಗುರುತಿಸಿ, ಶಾಶ್ವತ ಪರಿವರ್ತನೆಗಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಅಪೂರ್ವ ಸೇವಾ ಸಂಸ್ಥೆಯಾಗಿದೆ” ಎಂದು ಪದಗ್ರಹಣ ಅಧಿಕಾರಿ ರೊ. ಅಲೆನ್ ವಿನಯ್ ಲೂಯಿಸ್ ಹೇಳಿದರು.ಅವರು ರೋಟರಿ ಕ್ಲಬ್ ಕಟಪಾಡಿಯ 2026–27ನೇ ಸಾಲಿನ ರಜತ ಮಹೋತ್ಸವ (ಬೆಳ್ಳಿ ಹಬ್ಬ) ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರೋಟರಿ ಸಂಸ್ಥೆಯ ಸೇವಾ ಪರಂಪರೆಯನ್ನು ಸ್ಮರಿಸಿದ ಅವರು, ಸಮಾಜದ ದುರ್ಬಲ ವರ್ಗಗಳ ಬದುಕಿನಲ್ಲಿ ಶಾಶ್ವತ ಬದಲಾವಣೆ ತರಲು ರೋಟರಿ ಸಂಸ್ಥೆ ವಿಶ್ವದಾದ್ಯಂತ ಅನೇಕ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು. ಬೆಟ್ಟಗಾಡು ಪ್ರದೇಶಗಳಲ್ಲಿ ವಾಸಿಸುವ ಜನರ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಅಭಿವೃದ್ಧಿಗೆ ರೋಟರಿ ನೀಡಿರುವ ಕೊಡುಗೆ ಶ್ಲಾಘನೀಯವಾಗಿದೆ. ಯುವಜನರ ಸಬಲೀಕರಣ, ಮಹಿಳಾ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕೆಂದು ಕರೆ ನೀಡಿದರು.

ರೋಟರಿ ಕ್ಲಬ್ ಕಟಪಾಡಿ ತನ್ನ 25ನೇ ವರ್ಷದ ಸಂಭ್ರಮ ಆಚರಿಸುತ್ತಿದ್ದು, ನೂತನ ಅಧ್ಯಕ್ಷ ರೊ. ಕೆ. ಸುದರ್ಶನ್ ಮಲ್ಯ ಅವರ ನೇತೃತ್ವದಲ್ಲಿ ಕ್ಲಬ್ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ರೊ. ಹೇಮಂತ್ ಯು. ಕಾಂತ್, ಕಟಪಾಡಿ ರೋಟರಿ ಕ್ಲಬ್ ತನ್ನ ಆದರ್ಶ ಸೇವೆಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದೆ ಎಂದರು. ಸಮಾಜಮುಖಿ ಕಾರ್ಯಗಳಲ್ಲಿ ಸದಸ್ಯರ ಸೇವೆ ಮಾದರಿಯಾಗಿದ್ದು, ಬೆಳ್ಳಿ ಹಬ್ಬದ ವರ್ಷದಲ್ಲಿ ಶಾಶ್ವತ ಸೇವಾ ಯೋಜನೆಗಳ ಮೂಲಕ ಜನಸಾಮಾನ್ಯರ ಬದುಕಿನಲ್ಲಿ ಉತ್ತಮ ಬದಲಾವಣೆ ತರಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರೊ. ಕೆ. ಸುದರ್ಶನ್ ಮಲ್ಯ ಮಾತನಾಡಿ, ರೋಟರಿಯ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಮಾಜಸೇವೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬೆಳ್ಳಿ ಹಬ್ಬದ ವರ್ಷವನ್ನು ಸಾರ್ಥಕಗೊಳಿಸಲು ಸದಸ್ಯರೆಲ್ಲರ ಸಹಕಾರ ಮತ್ತು ಮಾರ್ಗದರ್ಶನ ಅಗತ್ಯವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ‘ರೊ. ಅಪ್ಪು ಮಾಷ್ಟ್ರು ಸ್ಮರಣಾರ್ಥ ಪ್ರತಿಭಾ ಪುರಸ್ಕಾರ’ ಪ್ರದಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಲಯ ಸೇನಾನಿ ರೊ. ಸಿ. ರಮಾನಂದ ಭಟ್, ನಿರ್ಗಮನ ಅಧ್ಯಕ್ಷೆ ರೊ. ಆಶಾ ಅಂಚನ್, ನಿರ್ಗಮನ ಕಾರ್ಯದರ್ಶಿ ರೊ. ಡಾ. ಚಂದ್ರಶೇಖರ್ ಸಾಲಿಮಠ, ನೂತನ ಕಾರ್ಯದರ್ಶಿ ರೊ. ಟಿ.ಆರ್. ದೊಡ್ಡಮನಿ ಉಪಸ್ಥಿತರಿದ್ದರು.

ರೋಟರಿ ಬ್ಯಾರರ್ಸ್‌ಗಳಾದ ರೊಟೇರಿಯನ್ ಶ್ರೀಕರ್ ಅಂಚನ್, ರೊಟೇರಿಯನ್ ಶಕುಂತಲಾ ಎ. ಪೂಜಾರಿ, ರೊಟೇರಿಯನ್ ಜಗನ್ನಾಥ ಕೋಟೆ, ರೊಟೇರಿಯನ್ ಲಕ್ಷ್ಮೀಬಾಯಿ, ರೊಟೇರಿಯನ್ ರಾಜೇಂದ್ರ ಭಟ್ ಹಾಗೂ ಕ್ಲಬ್ ಡೈರೆಕ್ಟರ್‌ಗಳಾದ ರೊಟೇರಿಯನ್ ರಂಜನ್ ಹೆಗಡೆ, ರೊಟೇರಿಯನ್ ತುಳಸಿ ಎಸ್. ದೇವಾಡಿಗ, ರೊಟೇರಿಯನ್ ರಿತೇಶ್ ಬಿ., ರೊಟೇರಿಯನ್ ಸತ್ಯೇಂದ್ರ ಪೈ ಮತ್ತು ರೊಟೇರಿಯನ್ ವಿಲ್ಫ್ರೆಡ್ ಲೂವಿಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *