×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ: ಅಗಲಿದ ಹಿರಿಯ ಪತ್ರಕರ್ತ ಗಣೇಶ್ ಪ್ರಭುಗೆ ಶ್ರದ್ಧಾಂಜಲಿ ಸಭೆ

ಉಡುಪಿ, ಎ.೨೧: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ ಗಣೇಶ್ ಪ್ರಭು ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಮಂಗಳವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿತ್ತು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಪತ್ರಕರ್ತರಿಗೆ ಇರಬೇಕಾದ ಎಲ್ಲಾ ಉತ್ತಮ ಗುಣಗಳು ಗಣೇಶ್ ಪ್ರಭು ಅವರಲ್ಲಿದ್ದವು. ಅವರ ವ್ಯಕ್ತಿತ್ವ ಇಂದಿನ ಪತ್ರಕರ್ತರಿಗೆ ಮಾದರಿಯಾಗಿದೆ. ಪತ್ರಿಕಾಗೋಷ್ಠಿಗಳಲ್ಲಿ ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡುವುದು ಬಹಳ ಕಷ್ಟವಾಗುತ್ತಿತ್ತು ಹಾಗೂ ಕೆಲವೊಮ್ಮೆ ಮಾನಸಿಕವಾಗಿ ವಿಚಲಿತರಾಗುತ್ತಿದ್ದುದುಂಟು. ಅವರ ಅಗಲಿಕೆಯ ಕೊರತೆಯನ್ನು ಮಾಧ್ಯಮ ಕ್ಷೇತ್ರದಲ್ಲಿ ತೀವ್ರವಾಗಿ ಅನುಭವಿಸಲಾಗುತ್ತಿದೆ. ಅವರ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ಹಿರಿಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ, ಗಣೇಶ್ ಪ್ರಭು ಯಾವುದೇ ಮುಲಾಜಿಲ್ಲದೆ ನೇರವಾಗಿ ಮಾತನಾಡುತ್ತಿದ್ದರು. ಅದರಿಂದ ಕೆಲವರು ಅವರನ್ನು ಇಷ್ಟಪಡುತ್ತಿರಲಿಲ್ಲ. ಅವರು ಯಾರಿಗೂ ಹೆದರದೇ ಎಲ್ಲವನ್ನೂ ನೇರವಾಗಿ ಪ್ರಶ್ನಿಸುತ್ತಿದ್ದರು. ಪ್ರಾಮಾಣಿಕ ಪತ್ರಕರ್ತರಾಗಿದ್ದ ಅವರು ಎಂದಿಗೂ ಹಣವನ್ನು ಬಯಸಲಿಲ್ಲ. ಪುಸ್ತಕಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ಅವರು ನಿರಂತರ ಓದು ಹವ್ಯಾಸ ಬೆಳೆಸಿಕೊಂಡಿದ್ದರು. ಎಲ್ಲ ಯುವ ಪತ್ರಕರ್ತರಿಗೆ ಅವರು ಮಾದರಿಯಾಗಿದ್ದಾರೆ ಎಂದರು.

ಹಿರಿಯ ಚಿಂತಕ ಪ್ರೊ. ಫಣಿರಾಜ್ ಮಾತನಾಡಿ, ಗಣೇಶ್ ಪ್ರಭು ಯಾವುದೇ ಪಕ್ಷಕ್ಕೂ ಬದ್ಧರಾಗಿರದೆ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಸ್ವಾತಂತ್ರ್ಯ ಚಳವಳಿ ಹಾಗೂ ಸಂವಿಧಾನ ಮೌಲ್ಯಗಳಿಗೆ ಮಾತ್ರ ಬದ್ಧರಾಗಿದ್ದರು. ಸಾರ್ವಜನಿಕ ವಿಷಯಗಳನ್ನು ಗ್ರಹಿಸುವಾಗ ಹಾಗೂ ವರದಿ ಮಾಡುವಾಗ ಆ ಮೌಲ್ಯಗಳನ್ನು ಎಂದಿಗೂ ಬಿಟ್ಟು ಹೋಗುತ್ತಿರಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸುವ ಕಠಿಣತೆಯನ್ನು ಕೊನೆಯವರೆಗೂ ಪಾಲಿಸಿಕೊಂಡು ಬಂದಿದ್ದರು ಎಂದು ತಿಳಿಸಿದರು.

ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಮಣಿಪಾಲ ಗಾಂಧಿಯನ್ ಸೆಂಟರ್ ಫಾರ್ ಫಿಲೋಸೋಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸ್‌ನ ನಿರ್ದೇಶಕ ವರದೇಶ್ ಹೀರೆಗಂಗೆ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ, ಮಾಜಿ ಅಧ್ಯಕ್ಷರಾದ ಗೋಕುಲ್‌ದಾಸ್ ಪೈ, ದಿನೇಶ್ ಕಿಣಿ, ರಾಜೇಶ್ ಶೆಟ್ಟಿ ಸೇರಿದಂತೆ ಹಲವರು ನುಡಿನಮನ ಸಲ್ಲಿಸಿದರು.

ಪತ್ರಕರ್ತರಾದ ಹರ್ಷರಾಜ್, ಬಿ.ಬಿ. ಶೆಟ್ಟಿಗಾರ್, ಕಿರಣ್ ಮಂಜನಬೈಲು, ಶಶಿಧರ್ ಮಾಸ್ತಿಬೈಲು, ಉಮೇಶ್ ಮಾರ್ಪಳ್ಳಿ, ಗೋಪಾಲಕೃಷ್ಣ ಪಾದೂರು, ದಿವಾಕರ್ ಭಂಡಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಭೆಯಲ್ಲಿ ಸಿಐಟಿಯು ಮುಖಂಡ ಕವಿರಾಜ್ ಎಸ್., ದಸಂಸ ಮುಖಂಡರಾದ ಮಂಜುನಾಥ್ ಗಿಳಿಯಾರು, ಶ್ಯಾಮ್‌ರಾಜ್ ಬಿರ್ತಿ, ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ವಂದಿಸಿದರು. ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *