×
Our website is made possible by displaying online advertisements to our visitors. Please consider supporting us by whitelisting our website.
  • 9880645340

ರಂಗಭೂಮಿ ರಂಗೋತ್ಸವ ಉದ್ಘಾಟನೆ : ರಂಗಕರ್ಮಿ ಪ್ರಸನ್ನ ಅವರಿಗೆ ರಂಗಭೂಮಿ ಪ್ರಶಸ್ತಿ ಪ್ರಧಾನ

ಉಡುಪಿ: ನಮ್ಮ ಪ್ರಾಚೀನ ಸಂಸ್ಕೃತಿ, ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ. ಏಚ್. ಎಸ್.ಬಲ್ಲಾಳ್ ಹೇಳಿದರು.

ಅವರು ಬುಧವಾರ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಉಡುಪಿಯ ಪ್ರತಿಷ್ಠಿತ ರಂಗಭೂಮಿ ಸಂಸ್ಥೆ ರಂಗಭೂಮಿ ಉಡುಪಿ ಹಮ್ಮಿಕೊಂಡಿರುವ ರಂಗಭೂಮಿ ರಂಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಂಗಕಲೆ, ಯಕ್ಷಗಾನ, ಹಾಗೂ ಪ್ರಾಚೀನ ಸಂಸ್ಕೃತಿ, ಸಂಪ್ರದಾಯ, ಕಲಾ ಪ್ರಕಾರಗಳನ್ನು ಬೆಳೆಸಲು ಮಾಹೆ ತನ್ನದೆ ಕೊಡುಗೆ ನೀಡುತ್ತಾ ಬಂದಿದೆ. ರಂಗಭೂಮಿ ಉಡುಪಿ ಸಂಸ್ಥೆ ಕಳೆದ 60 ವರ್ಷಗಳಿಂದ ರಂಗಭೂಮಿ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ತಲ್ಲೂರು ಶಿವರಾಮ ಶೆಟ್ಟರ ನೇತೃತ್ವದಲ್ಲಿ ನಾಟಕೋತ್ಸವ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಅವರು ಪ್ರಶಂಸಿದರು.

ಕಾರ್ಯಕ್ರಮದಲ್ಲಿ 2026 ನೇ ಸಾಲಿನ ರಂಗಭೂಮಿ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ, ನಾಟಕಕಾರ ಪ್ರಸನ್ನ
ವರಿಗೆ ಪ್ರಧಾನ ಮಾಡಲಾಯಿತು. ಪ್ರಶಸ್ತಿ 20,000 ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಸನ್ನ ಅವರು ಯಂತ್ರ ನಾಗರಿಕತೆ ಹಾಗೂ ಅತಿಯಾದ ಧಾರ್ಮಿಕತೆ ಎರಡೂ ಸದಾ ನಮ್ಮನ್ನು ಕಾಡುತ್ತಿರುತ್ತದೆ. ಯಂತ್ರಕ್ಕೂ ದೇವರಿಗೂ ವ್ಯತ್ಯಾಸವೇ ಇಲ್ಲದಾಗಿದೆ. ದೇವರು ಎನ್ನುವ ಪರಿಕಲ್ಪನೆ ಅನುಭವಿಸಬಲ್ಲದು, ಎಐ ಕೂಡ ಅದೇ ಆಗಿದೆ. ಆಂತರಿಕ ಬದುಕಿನ ಮೂಲಕ ಹೇಗೆ ಸತ್ಯದ ದಾರಿಯಲ್ಲಿ ಬದುಕಬಹುದು ಎಂಬುನ್ನು ಯೋಚಿಸುವುದು ಇಂದಿನ ಅಗತ್ಯವಾಗಿದೆ. ನಾಟಕ ಸತ್ಯದರ್ಶನದ ಮಾಧ್ಯಮವಾಗಿದೆ. ನಾಟಕ ಮೀರಿದ ನಟನೆ ಸತ್ಯದರ್ಶನವಾಗುತ್ತದೆ. ನಾಟಕದ ಅಪಹಾಸ್ಯ ನಿಲ್ಲಬೇಕು ಎಂದರು. ನಾಟಕ ಒಂದು ರೀತಿಯ ಆಟ ಇದ್ದಂತೆ. ಅದನ್ನು ನಮ್ಮನ್ನು ವಾಸ್ತವದಿಂದ ಹೊರಗಿಡುವಂತೆ ಮಾಡುತ್ತದೆ. ಸಿನೆಮಾ, ಧಾರವಾಹಿ, ರೀಲ್ಸ್‌ ಇತ್ಯಾದಿಗಳ ನಡುವೆ ನಿಜವಾದ ನಟನೆ, ನಾಟಕ, ಯಕ್ಷಗಾನ ಜೀವಂತವಾಗಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದರು.
ಪತ್ರಕರ್ತ ಹುಣಸವಾಡಿ ರಾಜನ್ ಅಭಿನಂದನಾ ಭಾಷಣ ಮಾಡಿದರು .
ಮಾಜಿ ಶಾಸಕ ಕೆ. ರಘುಪತಿ ಭಟ್‌, ರಂಗಭೂಮಿ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಕಿದಿಯೂರು, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಉಪಸ್ಥಿತರಿದ್ದರು.

ರಂಗಭೂಮಿ ಪ್ರಧಾನಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಗೀತಂ ಗಿರೀಶ್ ಪ್ರಶಸ್ತಿ ಪತ್ರ ವಾಚಿಸಿದರು. ಪೂರ್ಣಿಮಾ ಸುರೇಶ್ ನಿರೂಪಿಸಿ, ವಿವೇಕಾನಂದ ಎನ್. ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಅರುಣ್‌ ಲಾಲ್‌ ನಿರ್ದೇಶನದ ಕುಹೂ ನಾಟಕ ಪ್ರದರ್ಶನಗೊಂಡಿತು.

ಪೋಟೋ : ಕಾರ್ಯಕ್ರಮದಲ್ಲಿ 2026 ನೇ ಸಾಲಿನ ರಂಗಭೂಮಿ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ, ನಾಟಕಕಾರ ಪ್ರಸನ್ನ
ವರಿಗೆ ಪ್ರಧಾನ ಮಾಡಲಾಯಿತು.

Leave a Reply

Your email address will not be published. Required fields are marked *