×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮಾ.1 – ಮೊಗವೀರ ಕುಲಗುರುಗಳ ಪುತ್ಥಳಿ ಸ್ಥಾಪನೆ ಸಾಮೂಹಿಕ ಗುರು ಪಾದಕಾಣಿಕೆ ಸಮರ್ಪಣಾ ಸಮಾರಂಭ

ಮೊಗವೀರ ಸಮಾಜದ 9ನೇ ಹಾಗೂ ಹಾಗೂ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪ್ರತಿಮೆಯನ್ನು ಮೊಗವೀರ ಸಮಾಜದ ಶೃದ್ಧಾಕೇಂದ್ರವಾದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳ ಆವರಣದಲ್ಲಿ ಸುಮಾರು 3 ಕೋ. ರೂ. ವೆಚ್ಚದಲ್ಲಿ ನಿರ್ಮಿಸಿ, ಸ್ಥಾಪಿಸಲುದ್ದೇಶಿಸಿದ್ದು ಮಾ.1ರಂದು ಸಾಮೂಹಿಕ ಗುರು ಪಾದಕಾಣಿಕೆ ಸಮರ್ಪಣೆ, ಬೃಹತ್ ಸಮಾವೇಶ ಹಾಗೂ ಬೈಕ್ ರ್ಯಾಲಿ ಆಯೋಜಿಸಿರುವುದಾಗಿ ದೇವಳದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ಕಾರ್ಯಕ್ರಮದ ರೂವಾರಿ ಹಾಗೂ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್ ತಿಳಿಸಿದರು.

ಶುಕ್ರವಾರ ದೇವಳದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು,ಸಮಾಜ ಬಾಂಧವರ ಸಹಕಾರದಿಂದ ನಿರ್ಮಿಸುವ ಪುತ್ಥಳಿ ಪ್ರತಿಷ್ಠಾಪನೆ ಸಮಾಜದ ಏಕತೆ, ಸ್ವಾಭಿಮಾನ ಹಾಗೂ ಗುರುಭಕ್ತಿಯ ಸಂಕೇತವಾಗಲಿದೆ. ಈ ಪುಣ್ಯ ಕಾರ್ಯದಲ್ಲಿ ಮೊಗವೀರ ಸಮಾಜ ಬಾಂಧವರು ಶಕ್ತ್ಯಾನುಸಾರ ಕಾಣಿಕೆ ನೀಡುವ ಉದ್ದೇಶದಿಂದ ಸಾಂಕೇತಿಕವಾಗಿ ಸಾಮೂಹಿಕ ಗುರು ಪಾದಕಾಣಿಕೆ ಸಮರ್ಪಣೆ ಕಾರ್ಯಕ್ರಮ ಮಾ.1ರಂದು ಬೆಳಿಗ್ಗೆ 9.30ರಿಂದ ಉಚ್ಚಿಲ ಶ್ರೀಮತಿ ಶಾಲಿನಿ ಡಾ.ಜಿ. ಶಂಕರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 10.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.

ಸ್ವರ್ಣಲೇಪಿತ ಪಾದುಕಾ ಸ್ಥಾಪನೆ
ದೇವಸ್ಥಾನದ ಮುಂಭಾಗದಲ್ಲಿ ಗುರುಗಳ ಪುತ್ಥಳಿ ಸ್ಥಾಪಿಸಲು ಉದ್ದೇಶಿಸಿದ್ದು, ಗುರುಗಳ ಸ್ವರ್ಣಲೇಪಿತ ಪಾದುಕೆಗಳನ್ನಿಡಲು ಉದ್ದೇಶಿಸಲಾಗಿದೆ. ಅದೇ ಜಾಗದಲ್ಲಿ ಗುರು ಪಾದಕಾಣಿಕೆ ಸಮರ್ಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಬೃಹತ್ ಸಮಾವೇಶ
ಕೇರಳದ ಉಪ್ಪಳದಿಂದ ಬೈಂದೂರು ತಾಲೂಕಿನ ಶೀರೂರು ವರೆಗಿನ ಒಟ್ಟು 336 ಮೊಗವೀರ ಗ್ರಾಮಸಭೆ ಹಾಗೂ ಕೂಡುಕಟ್ಟು ಸೇರಿದಂತೆ ದೇಶ- ವಿದೇಶಗಳಲ್ಲಿರುವ ಮೊಗವೀರ ಸಂಘಟನೆಗಳ ಸುಮಾರು 10 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಸಮಾಜ ಭಾಂಧವರು ಭಾಗವಹಿಸಲಿದ್ದಾರೆ.

ಬೈಕ್ ರ್ಯಾಲಿ
ಈ ಮಹತ್ವದ ಕಾರ್ಯಕ್ರಮದ ಅಂಗವಾಗಿ ಮೊಗವೀರ ಸಮಾಜದ ಯುವ ಬಾಂಧವರಿಗಾಗಿ ದ್ವಿಚಕ್ರ ವಾಹನ ರ್ಯಾಲಿ ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆ 9.30ರಿಂದ ನಡೆಯಲಿದೆ.

ರ್ಯಾಲಿ ಉಚ್ಚಿಲ ದೇವಳದ ಉತ್ತರ ದಿಕ್ಕಿನ ಪಾಂಗಾಳ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ಆವರಣದಿಂದ ಹಾಗೂ ದಕ್ಷಿಣ ದಿಕ್ಕಿನ ಹೆಜಮಾಡಿ ಟೋಲ್ ಗೇಟ್’ನಿಂದ ಆರಂಭಗೊಂಡು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ಸಮಾಪನಗೊಳ್ಳಲಿದೆ. ಸುಮಾರು 2 ಸಾವಿರ ದ್ವಿಚಕ್ರ ವಾಹನಗಳು ಭಾಗವಹಿಸುವ ನಿರೀಕ್ಷೆ ಇದ್ದು ಶಿಸ್ತುಬದ್ಧವಾಗಿ ಮತ್ತು ಸಂಚಾರ ನಿಯಮ ಪಾಲಿಸಿ ವಾಹನ ಜಾಥಾ ನಡೆಸಲಾಗುವುದು ಎಂದರು.

ಅಂಗಾಂಗ ದಾನ
ಸಾಮಾಜಿಕ ಕಾರ್ಯಗಳಿಗೂ ಆದ್ಯತೆ ನೀಡಲಾಗುತ್ತಿದ್ದು ಸಮಾರಂಭದಲ್ಲಿ 500ಕ್ಕಿಂತ ಅಧಿಕ ಯುವಜನರಿಂದ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗುವುದು ಎಂದು ಡಾ.ಜಿ. ಶಂಕರ್ ವಿವರಿಸಿದರು.

ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಪಾಧ್ಯಕ್ಷ ಮೋಹನ ಬೆಂಗ್ರೆ, ಉಚ್ಚಿಲ ದೇವಳ ಕ್ಷೇತ್ರಾಧ್ಯಕ್ಷ ಗಿರಿಧರ್ ಸುವರ್ಣ, ಪುತ್ಥಳಿ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮನೋಜ್ ಸಾಲ್ಯಾನ್, ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ್ ಸಾಲಿಯಾನ್, ಸತೀಶ್ ಅಮೀನ್ ಬೆಣ್ಣೆಕುದ್ರು, ಉದಯ ಕುಮಾರ್ ಹಟ್ಟಿಯಂಗಡಿ, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರವೀಶ್ ಎಸ್. ಕೊರವಡಿ, ಪುತ್ಥಳಿ ನಿರ್ಮಾಣ ಸಮಿತಿ ಕೋಶಾಧಿಕಾರಿ ದಿನೇಶ್ ಎರ್ಮಾಳ್, ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ, ಸುಜಿತ್ ಸಾಲ್ಯಾನ್, ಮೂಲ್ಕಿ, ಗುಂಡು ಬಿ.ಅಮೀನ್, ಸುಧಾಕರ ಕುಂದರ್, ರಾಜೇಶ್ ಪುತ್ರನ್ ಉಳ್ಳಾಲ, ಲೋಕೇಶ್ ಸುವರ್ಣ ಕುದ್ರೋಳಿ, ಪವನ್ ಆನಂದ್ ಎರ್ಮಾಳ್ ತೆಂಕ, ಯಜ್ಞೇಶ್ ಕರ್ಕೇರ, ಸತೀಶ್ ಕುಂದರ್ ಮಲ್ಪೆ ಮೊದಲಾದವರಿದ್ದರು.

Leave a Reply

Your email address will not be published. Required fields are marked *