×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಹಳ್ಳಾಡಿ ಜಯರಾಮ ಶೆಟ್ಟರಿಗೆ ಪುಂಡಲೀಕ ಹಾಲಂಬಿ ಪ್ರಶಸ್ತಿ ಪ್ರದಾನ ನೈಜ ಸಾಧಕರಿಗೆ ಪ್ರಶಸ್ತಿ ಮೂಲಕ ಸಮಾಜದಿಂದ ಗೌರವ : ಡಾ.ತಲ್ಲೂರು

ಉಡುಪಿ : ಹಳ್ಳಾಡಿ ಜಯರಾಮ ಶೆಟ್ಟಿ ಅವರಂತಹ ಹಿರಿಯ ಯಕ್ಷಗಾನ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ. ಅವರಿಗೆ ಪುಂಡಲೀಕ ಹಾಲಂಬಿ ಪ್ರಶಸ್ತಿ ನೀಡಿರುವುದು ನೈಜ ಸಾಧಕನಿಗೆ ಸಂದ ಗೌರವವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಶನಿವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಧರ್ಮಪತ್ನಿ ಜಿ. ಸರೋಜಮ್ಮ ಪ್ರಾಯೋಜಿತ ಪುಂಡಲೀಕ ದತ್ತಿ ಕಾರ್ಯಕ್ರಮದಡಿ ಖ್ಯಾತ ಯಕ್ಷಗಾನ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಅವರಿಗೆ ಪುಂಡಲೀಕ ಹಾಲಂಬಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಹಳ್ಳಾಡಿ ಜಯರಾಮ ಶೆಟ್ಟಿ ಅವರಂತಹ ಹಿರಿಯ ಕಲಾವಿದರು, ತಮ್ಮ ಕಲಾಪ್ರತಿಭೆಯಿಂದಲೇ ಬೆಳೆದು ಬಂದವರು. ಅವರಿಗೆ ಕಲೆಯೇ ಉಸಿರು. ಇಂತಹ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದು ಸಂಸ್ಥೆಯ ಗೌರವವನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಹಾಲಂಬಿಯವರು ಸಾಹಿತ್ಯ ಪರಿಷತ್‌ಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಹಳ್ಳಾಡಿ ಜಯರಾಮ ಶೆಟ್ಟರು ಉತ್ತಮ ಹಾಸ್ಯ ಕಲಾವಿದ. ಅವರಿಗೆ ಈ ಪ್ರಶಸ್ತಿ ನೀಡುವ ಮೂಲಕ ಅದರ ಮೌಲ್ಯ ಇನ್ನಷ್ಟು ಹೆಚ್ಚಾಗಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಹಳ್ಳಾಡಿ ಜಯರಾಮ ಶೆಟ್ಟಿ ಮಾತನಾಡಿ, 50 ವರ್ಷಗಳ ಹಿಂದೆ 40 ಪೈಸೆಗೆ ಯಕ್ಷರಂಗದಲ್ಲಿ ದುಡಿಮೆ ಆರಂಭಿಸಿದ ನಾನು ಇಂದು ಈ ಪ್ರಶಸ್ತಿ ರೂಪದಲ್ಲಿ ಒಂದೇ ದಿನದಲ್ಲಿ 25 ಸಾವಿರ ರೂ. ಪಡೆಯುವ ಮಟ್ಟಿಗೆ ಬೆಳೆಯಲು ಕಾರಣ ಯಕ್ಷಗಾನ ಅಭಿಮಾನಿಗಳು. ಈ ಗೌರವ ಎಲ್ಲವೂ ಅವರಿಗೆ ಸಲ್ಲಬೇಕು ಎಂದರು.

ಕಸಾಪ ಸ್ಥಾಪಕಾಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ ಅಭಿನಂದನಾ ನುಡಿಗಳನ್ನಾಡಿದರು. ಕಸಾಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಆಶಯ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಲೇಖಕ ಜಯಪ್ರಕಾಶ್ ಪುತ್ತೂರು ರಚಿಸಿದ ‘ವ್ಯಕ್ತಿತ್ವ ವಿಕಸನ ವಿಚಾರಧಾರೆ’ ಕೃತಿಯನ್ನು ಎ.ಎಸ್.ಎನ್.ಹೆಬ್ಬಾರ್ ಬಿಡುಗಡೆಗೊಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ದತ್ತಿನಿಧಿ ದಾನಿ ಜಿ. ಸರೋಜಮ್ಮ ಪುಂಡಲೀಕ ಹಾಲಂಬಿ, ಸಾಂಸ್ಕೃತಿಕ ಚಿಂತಕ ಕೆ. ಸೀತಾರಾಮ ನಕ್ಕತ್ತಾಯ, ಕುಂದಾಪುರ ಸರಕಾರಿ ಪ್ರ.ಪೂ. ಕಾಲೇಜಿನ ಪ್ರಾಂಶುಪಾಲ ಜಿ. ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಸ್ತಾವಿಸಿ, ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಪರಿಚಯಿಸಿದರು. ಮನೋಹರ ಪಿ. ಸ್ವಾಗತಿಸಿ, ಮಂಜುನಾಥ ಕೆ.ಎಸ್. ವಂದಿಸಿದರು. ದಿನಕರ ಆರ್. ಶೆಟ್ಟಿ ನಿರೂಪಿಸಿದರು.

Leave a Reply

Your email address will not be published. Required fields are marked *