×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ | ಡಿ 2 ರಂದು ಜೈ ಬಾಪು, ಜೈ ಭೀಮಾ, ಜೈ ಸಂವಿಧಾನ ಸಮಾವೇಶ

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಹಕಾರದಲ್ಲಿ ಜೈ ಬಾಪು, ಜೈ ಭೀಮ್,ಜೈ ಸಂವಿಧಾನ ಸಮಾವೇಶ ಡಿ. 2 ರಂದು ಬೆಳಗ್ಗೆ 10.30 ಕ್ಕೆ ಅಜ್ಜರಕಾಡು ಪುರಭವನದಲ್ಲಿ ನಡೆಯಲಿದೆ.

ಈ ಬಗ್ಗೆ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ 100 ರ ಸಂಭ್ರಮದ ಸವಿನೆನಪಿಗಾಗಿ ಈ ಕಾರ್ಯಕ್ರಮ ರಾಜ್ಯದ ವಿವಿದೆಡೆ ಆಯೋಜಿಸಲಾಗಿದೆ. ಆ ಪ್ರಯುಕ್ತ ಜಿಲ್ಲಾ ಪ್ರಚಾರ ಸಮಿತಿಗಳ ಆಶ್ರಯದಲ್ಲಿ ಆಯಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಿಸೆಂಬರ್ ತಿಂಗಳ ಕೊನೆಯವರೆಗೆ ಕರ್ನಾಟಕದ ಎಲ್ಲಾ 35 ಜಿಲ್ಲೆಗಳಲ್ಲೂ ನಡೆಸಲಾಗುವುದು ಎಂದರು.

ಗಾಂಧೀಜಿ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಮತ್ತು ಸಂವಿಧಾನದ ಕುರಿತು ಹಾಗೂ ಕೇಂದ್ರದ ಬಿಜಿಪಿ ಸರಕಾರ ಚುನಾವಣಾ ಆಯೋಗದ ಸಹಕಾರದಿಂದ ನಡೆಸುತ್ತಿರುವ ‘ಓಟ್‌ ಚೋರಿ’ ಬಗೆಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ರಾಜ್ಯದ 59000 ಬೂತ್ ಗಳಲ್ಲಿ ತಲಾ ಇಬ್ಬರಂತೆ 1,18,000 ಪ್ರತಿನಿಧಿಗಳನ್ನು ಆರಿಸಿ ಅವರಿಗೆ ಒಂದು ದಿನದ ತರಬೇತಿ ಕೂಡಾ ನೀಡಲಾಗುವುದು ಎಂದು ಅವರು ತಿಳಿಸಿದರು.

ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಅಲೆವೂರು ಹರೀಶ್ ಕಿಣಿ ಮಾತನಾಡಿ, ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷರು ಹಾಗೂ ಉಡುಪಿ ಜಿಲ್ಲೆಯ ಪ್ರಚಾರ ಸಮಿತಿಯ ಉಸ್ತುವಾರಿ ಕಿಮ್ಮನೆ ರತ್ನಾಕರ್, ಪ್ರಚಾರ ಸಮಿತಿಯ ಉಪಾಧ್ಯಕ್ಷ ಮುನೀರ್ ಜನ್ಸಾಲೆ, ಕೆ ಪಿ ಸಿ ಸಿ ವಕ್ತಾರ ಸುಧೀರ್ ಮರೋಳಿ, ಮುಖ್ಯ ಸಂಯೋಜಕ ಚಲನಚಿತ್ರ ನಟ, ನಿರ್ದೇಶಕ ಎಸ್ .ನಾರಾಯಣ್‌, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ .ಎ. ಗಫೂರ್, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ ಮುದ್ರಾಡಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಕೊಡವೂರ್, ಮಾಜಿ ಶಾಸಕ ಗೋಪಾಲ್ ಪೂಜಾರಿ, ಮುಖಂಡರುಗಳಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಪ್ರಸಾದ್ ರಾಜ್ ಕಾಂಚನ್, ಕೆ ಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಅಧ್ಯಕ್ಷರು, 7 ತಾಲೂಕು ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಚಾರ ಸಮಿತಿಯ ಮತ್ತು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರುಗಳು ಉಪಸ್ಥಿತರಿರುವರು. ಸಮಾವೇಶದಲ್ಲಿ 1500ರಷ್ಟು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಕಾಪು ಬ್ಲಾಕ್ ಅಧ್ಯಕ್ಷ ಅಖಿಲೇಶ್ ಕೋಟ್ಯಾನ್, ಉಡುಪಿ ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ರಾಜೇಶ್ ಶೆಟ್ಟಿ, ಹಾಗೂ ಜಿಲ್ಲಾ ಉಪಾಧ್ಯಕ್ಷ ದಿನಕರ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *