ಶಿರ್ವ: ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಟೋಬರ್ 18ರ ಭಾನುವಾರದಂದು ಶಾಲೆಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಪ್ರಗತಿಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯ ಮಹಾಸಭೆ ನಡೆಯಿತು.
ಸಭೆಯಲ್ಲಿ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಹಾಗೂ ಶಾಲೆಯ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಶಾಲಾ ಆಡಳಿತ ಮಂಡಳಿಯ ನೂತನ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಅಧ್ಯಕ್ಷರಾಗಿ ಖಾಲಿದ್ ಮೊಹಮ್ಮದ್, ಉಪಾಧ್ಯಕ್ಷರಾಗಿ ಕೆ. ಮೊಹಮ್ಮದ್ ಇಮ್ರಾನ್ ಹಾಗೂ ಶಬೀಹ್ ಅಹ್ಮದ್ ಖಾಝಿ, ಪ್ರಧಾನ ಕಾರ್ಯದರ್ಶಿಯಾಗಿ ಉಮ್ಮರ್ ಇಸ್ಮಾಯಿಲ್, ಜಂಟಿ ಕಾರ್ಯದರ್ಶಿಗಳಾಗಿ ಮೊಹಮ್ಮದ್ ಸಾದಿಕ್ ಹಾಗೂ ಮೊಹಮ್ಮದ್ ಸಾಹೇಬ್, ಖಜಾಂಚಿಯಾಗಿ ಪರ್ವೇಜ್ ಸಲೀಂ ಮತ್ತು ಆಂತರಿಕ ಲೆಕ್ಕಪರಿಶೋಧಕರಾಗಿ ಹಸನಬ್ಬ ಶೇಖ್ ಆಯ್ಕೆಯಾದರು.
ಇದಲ್ಲದೆ, ಮೊಹಮ್ಮದ್ ಯೂನುಸ್, ಅಬ್ದುಲ್ ಲತೀಫ್ ಉಮ್ಮರ್, ಹಾಫಿಜ್ ಸಯ್ಯದ್ ಇಬ್ರಾಹಿಂ, ಶೈಖ್ ಮುಸ್ತಾಕೀಮ್, ನೂರ್ ಮೊಹಮ್ಮದ್ ಹಾಗೂ ಅಶ್ಫಾಕ್ ಅಹ್ಮದ್ ಅವರು ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.
ನೂತನ ಆಡಳಿತ ಮಂಡಳಿಯು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಶಾಲೆಯ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಸಮಗ್ರ ಉನ್ನತಿಗಾಗಿ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಕೈಗೊಂಡಿತು.

