×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿಯವರು ನಡೆಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಇಲ್ಲಿನ ಮಣ್ಣಿನ ಮತ್ತು ಪದ್ಧತಿಗಳ
ಭಾಂದವ್ಯ ಕಾಣುತ್ತದೆ- ಹರಿರಾಮ್ ಶಂಕರ್

ಉಡುಪಿಯವರು ನಡೆಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ  ಇಲ್ಲಿನ ಮಣ್ಣಿನ ಮತ್ತು ಪದ್ಧತಿಗಳ ಭಾಂದವ್ಯ ಕಾಣುತ್ತದೆ  ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರ್ ಹೇಳಿದರು. ಬೆಂಗಳೂರಿನ ರಾಜಾಜಿನಗರದ ಸ್ಪಂದನ ಸೇವಾ ಸಂಸ್ಥೆ ವತಿಯಿಂದ
ಉಡುಪಿ ಜಿಲ್ಲೆಯ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ವಿಜಯ ಕರ್ನಾಟಕ ಉಡುಪಿ ಜಿಲ್ಲಾ ವರದಿಗಾರರಾದ ಸುಬ್ರಮಣ್ಯ.ಜಿ ಕುರ್ಯ ರವರಿಗೆ
“ಯಶೋ ಮಾಧ್ಯಮ-2026” ಪ್ರಶಸ್ತಿಯನ್ನು ವಿತರಿಸಿ ಅವರು ಮಾತನಾಡಿದರು.

ನಾನು ನೋಡಿದ ಪ್ರಕಾರ ಉಡುಪಿಯಲ್ಲಿ ಆಗುವ ಹೆಚ್ಚಿನ ಕಾರ್ಯಕ್ರಮಗಳೆಲ್ಲ ಅದು ಸಣ್ಣದಿರಲಿ, ದೊಡ್ಡದಿರಲಿ, ತುಂಬಾ ಅರ್ಥಪೂರ್ಣವಾಗಿರುತ್ತದೆ.
ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆಯವರು ಈ ಶಾಲೆಯ ಮಕ್ಕಳಿಗೆ ನೀಡುವ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ.  ಹಿರಿಯ ಪತ್ರಕರ್ತರಿಗೆ ಸನ್ಮಾನ ಮಾಡುವುದಕ್ಕೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂತ ನಾನು ಅಂದುಕೊಳ್ಳುತ್ತಿದ್ದೇನೆ.  ಸ್ಪಂದನಾ ಸಂಸ್ಥೆಯಿಂದ ಈ ತರದ ಅರ್ಥವತ್ತಾದ ಕಾರ್ಯಕ್ರಮಗಳು ಮಾಡಲಿಕ್ಕೆ ಶಕ್ತಿ ಸಿಗಲಿ. ಇನ್ನು ಮುಂದೆಯು ಸಹ ಈ ಮಕ್ಕಳ ಕೈ ಹಿಡಿದು ಅವರಿಗೆ ಅವರು ಆಸೆ ಪಡುವಂತಹ ಹುದ್ದೆಗಳಿಗೆ,  ಮುಂದುವರಿಯಲು ಅವಕಾಶ ಕೊಡಲಿಕ್ಕೆ ಈ ಸಂಸ್ಥೆಗೆ ಆಗಲಿ ಎಂದರು.

ಪತ್ರಕರ್ತ ಜನಾರ್ದನ್ ಕೊಡವೂರು ಮಾತನಾಡಿ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆಯ ಜೊತೆಗೆ ಉಡುಪಿ ಜಿಲ್ಲೆಯ ಪತ್ರಕರ್ತರಿಗೆ ನೀಡುವ “ಯಶೋ ಮಾಧ್ಯಮ-2026” ಪ್ರಶಸ್ತಿಯನ್ನು ಸುಬ್ರಹ್ಮಣ್ಯ. ಜಿ. ಕುರ್ಯ ರವರಿಗೆ ನೀಡಿರುವುದು ಶ್ಲಾಘನೀಯ. ಹಾಗೆಯೇ ಶ್ರೀವೆಂಕಟರಮಣ ದೇವಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿಯವರಿಗೆ ಸನ್ಮಾನ ಮಾಡಿರುವುದು ಒಳ್ಳೆಯ ಕೆಲಸ ಎಂದು ಹೇಳಿದರು.


“ಯಶೋ ಮಾಧ್ಯಮ-2026″ಪ್ರಶಸ್ತಿ ಪುರಸ್ಕೃತರಾದ ಸುಬ್ರಮಣ್ಯ. ಜಿ. ಕುರ್ಯ ರವರು ಮಾತನಾಡಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಕಲ್ಯಾಣಪುರದ ಶ್ರೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಾಮರಾಯ್ ಕಿಣಿಯವರು ಮಾತನಾಡಿ ಸ್ಪಂದನಾ ಸೇವಾ ಸಂಸ್ಥೆಯು ಸುಮಾರು 18 ವರ್ಷಗಳಿಂದ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡುತ್ತಿರುವುದರ ಜೊತೆಗೆ ಪತ್ರಕರ್ತರಿಗೆ ಪ್ರಶಸ್ತಿ, ಗಿಡ ನೆಡುವ ಕಾರ್ಯಕ್ರಮವು ಸಮಾಜ ಮೆಚ್ಚುವ ಕಾರ್ಯವಾಗಿದೆ. ಶ್ರೀವೆಂಕಟರಮಣ ದೇವಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ನಮ್ಮ ಏಳು ಜನ ಆಡಳಿತ ಮಂಡಳಿಯವರಿಗೆ ಗೌರವಿಸಿ ಸನ್ಮಾನಿಸುವುದಕ್ಕೆ ಧನ್ಯವಾದ ತಿಳಿಸಿದರು.

ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿಗಳಾದ ಸುಬ್ರಮಣ್ಯ ಕಾರಂತ್, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ ನ ಸಹಾಯಕ ಪ್ರಾಧ್ಯಾಪಕಿ
ಡಾ.ಮರಿಯಾ ಪಾಯಸ್, ಕಲ್ಯಾಣಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ, ಸ್ಪಂದನಾ ಸೇವಾ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲುರವರ ನೇತೃತ್ವದಲ್ಲಿ “ಪರಿಸರ ದಿನಾಚರಣೆ”ಯ ಅಂಗವಾಗಿ ಶಾಲೆಯ ಸುತ್ತಮುತ್ತ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು. ಹಾಗೆಯೇ ಜಿ.ಎಸ್.ಬಿ ಸಮುದಾಯದ “ರುದ್ರ ಭೂಮಿ” ಯ ಅಭಿವೃದ್ಧಿಗೆ ಸದಾ ದುಡಿಯುತ್ತಿರುವ ಸಮಾಜ ಸೇವಕರಾದ ಪ್ರಕಾಶ್ ಕಾಮತ್ ರವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ  ಸುಮನ ಪೈ, ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ ಪೈ, ಖಜಾಂಚಿರಜನಿ ವಿ.ಪೈ, ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್ ಶೆಟ್ಟಿ, “ಯೂತ್ ಆಫ್ ಜಿ.ಎಸ್.ಬಿ”ಯ ಸದಸ್ಯ ಅಜಿತ್ ಪೈ, ಸ್ದಳೀಯರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು
ಉಪಸ್ಥಿತರಿದ್ದರು. ವೆಂಕಟೇಶ್ ಪೈ ಸ್ವಾಗತಿಸಿದರು. ಸಂತೋಷ್ ಕಾಮತ್ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *