ನಮ್ಮದು ಒಂದೇ ಪಕ್ಷ. ಅದುವೇ ಸಹಕಾರಿ ಪಕ್ಷ, ಇದರ ಮೂಲಕ ನಾವೆಲ್ಲರೂ ಒಗ್ಗಟ್ಟಾಗಿ ಜನರ ಸೇವೆ ಮಾಡೋಣ ಎಂದು ಸಹಕಾರ ರತ್ನ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ. ಎನ್ ರಾಜೇಂದ್ರ ಕುಮಾರ್ ಹೇಳಿದರು.
ಮಂಗಳೂರಿನ ಪ್ರಧಾನ ಕಚೇರಿ ಸಭಾಂಗಣದಲ್ಲಿ ಸಹಕಾರ ರತ್ನ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರ 77ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೆಲಸ ಮಾಡುವ ಸಹಕಾರಿಗಳಿಂದಾಗಿ ಜಿಲ್ಲೆಯೀಗ ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದೆ. ರಾಜ್ಯದಲ್ಲಿ ಅತೀ ಹೆಚ್ಚು ಕೃಷಿ ಸಾಲ ನೀಡಿದ ಜಿಲ್ಲೆ ಅದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಹೆಣ್ಣು ಮಕ್ಕಳಿಗೆ ಸ್ವಸಹಾಯ ಗುಂಪಿನ ಮೂಲಕ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಇದೀಗ 9 ಜಿಲ್ಲೆಯಲ್ಲಿ ನವೋದಯ ಮಹಿಳೆಯರ ಸಂಖ್ಯೆ ಲಕ್ಷ ದಾಟಿದೆ. ಸಾಲದ ಮರುಪಾವತಿ ಮಾಡಿದ ಪ್ರಮಾಣ 98.5 ಶೇಕಡಾ ಆಗಿದೆ ಎಂದರು.
ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮಿಯಿಲಿ ಅವರು ತಮ್ಮ ಅಭಿನಂದನಾ ಭಾಷಣದಲ್ಲಿ ಸಹಕಾರ ರತ್ನ ಎಂ.ಎನ್ ರಾಜೇಂದ್ರ ಕುಮಾರ್ ಅವರ ಗುಣಗಾನ ಮಾಡಿದರು. ಎಂ. ಎನ್ ರಾಜೇಂದ್ರ ಕುಮಾರ್ ಅವರು ಬ್ಯಾಂಕಿನ ಅಭಿವೃದ್ಧಿಯ ರೂವಾರಿ ಮಾತ್ರವಲ್ಲದೆ ಕೃಷಿಕನ ಬದುಕಿನ ಅಭಿವೃದ್ಧಿಯ ರೂವಾರಿಯೂ ಹೌದು. ಸಹಕಾರಿ ಸಂಘಗಳು ಮುನ್ನಡೆಯ ಬೇಕಾದರೆ ಪ್ರಾಮಾಣಿಕತೆ ಅತ್ಯವಶ್ಯಕ. ಆ ಪ್ರಾಮಾಣಿಕತೆಯ ಉತ್ಕೃಷ್ಟವಾದ ಮಹಾನ್ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಆ ತತ್ವಗಳನ್ನ ಉಳಿದ ಸಹಕಾರಿಗಳಿಗೆ ಹಂಚಿಕೊಂಡಿರುವ ನಾಯಕತ್ವ ಗುಣ ಎಂ.ಎನ್ ರಾಜೇಂದ್ರ ಕುಮಾರ್ ಅವರದ್ದು ಎಂದು ವೀರಪ್ಪ ಮೊಯಿಲಿ ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ಎಂ.ಎನ್ ರಾಜೇಂದ್ರ ಕುಮಾರ್ ಅವರಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು. ಬಳಿಕ ಕೇಕ್ ಕತ್ತರಿಸುವ ಮೂಲಕ 77ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಸಭಾ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ 77ನೇ ಹುಟ್ಟು ಹಬ್ಬದ ಅಂಗವಾಗಿ 77 ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಈ ವೇಳೆ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ಪ್ರಮುಖರು, ರಾಜಕೀಯ ಮುಖಂಡರು ಮತ್ತು ಅಭಿಮಾನಿಗಳು ಭಾಗವಹಿಸಿ ಶುಭ ಕೋರಿದರು. ಸಮಾರಂಭದಲ್ಲಿ ಅಭಿನಂದನಾ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


