Site icon ಉಡುಪಿ ನ್ಯೂಸ್ ಪ್ಲಸ್

ಎಪ್ರಿಲ್ 27 ರಂದು ರಾಹುಲ್ ಗಾಂಧಿ ಉಡುಪಿಗೆ ಉಚ್ಚಿಲದಲ್ಲಿ ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮ

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಎ.27ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದ್ದು, ಅಂದು ಅವರು ಉಚ್ಚಿಲದಲ್ಲಿ ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಿರುವರು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ. ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ 40 ಮಂದಿ ಸ್ಟಾರ್ ಕ್ಯಾಂಪೆನ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹಲವು ಮಂದಿ ನಾಯಕರು ಜಿಲ್ಲೆಗೆ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪರವಾದ ಹವಾ ಇದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾದ ಅಚ್ಚರಿ ಫಲಿತಾಂಶ ಹೊರಬೀಳಲಿದೆ ಎಂದರು. ಎ.23ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬೈಂದೂರಿಗೆ ಆಗಮಿಸಿ, ಮಧ್ಯಾಹ್ನ 3.30ಕ್ಕೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿರುವರು. ನಂತರ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅವರು ಎ.24ರಂದು ಮಧ್ಯಾಹ್ನ ಉಡುಪಿಗೆ ಆಗಮಿಸಿ ಮಧ್ಯಾಹ್ನ 3ಗಂಟೆಯಿಂದ ಸಂಜೆ 5ಗಂಟೆವರೆಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಅಜ್ಜರಕಾಡಿನ ಹುತಾತ್ಮ ಚೌಕದವರೆಗೆ ರೋಡ್ ಶೋ ನಡೆಸಲಿದ್ದಾರೆ. ಸುಮಾರು 5-10ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು. 

ಅದೇ ರೀತಿ ಈ ತಿಂಗಳ ಕೊನೆಯಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಉಡುಪಿ ಜಿಲ್ಲೆಗೆ ಆಗಮಿಸಲಿದ್ದಾರೆ, ಕೇರಳ ಸಂಸದ ಟಿ.ಎನ್.ಪ್ರತಾಪನ್ ಜಿಲ್ಲೆಯ ಕರಾವಳಿಯ ನಾಲ್ಕು ಕ್ಷೇತ್ರಗಳಲ್ಲಿ ಮೀನುಗಾರರ ಸಂಘಟನೆಯೊಂದಿಗೆ ಪುಚಾರ ಕಾರ್ಯ ಮಾಡಲಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಜಿಲ್ಲೆಗೆ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದರು. ಉಡುಪಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿದರು.ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ಕೊಡವೂರು  ಪ್ರಸಾದ್‌ರಾಜ್ ಕಾಂಚನ್ ಎಂ ಎ ಗಫೂರ್ ಅಮೃತ್ ಶೆಣೈ ಕಿಶನ್ ಹೆಗ್ಡೆ ರಮೇಶ್ ಕಾಂಚನ್ ನರಸಿಂಹ ಮೂರ್ತಿ ಮಹಾಬಲ ಕುಂದರ್ ದಿನಕರ್ ಹೇರೂರ್ ಕುಶಾಲ್ ಶೆಟ್ಟಿ ಪ್ರಖ್ಯಾತ್ ಶೆಟ್ಟಿ ಮುಂತಾದವರು  ಉಪಸ್ಥಿತರಿದ್ದರು 

Exit mobile version