Site icon ಉಡುಪಿ ನ್ಯೂಸ್ ಪ್ಲಸ್

ಸಾಲದ ಬಾಧೆಯಿಂದ ಮನನೊಂದ ಪೊಲೀಸ್ ಕಾನ್​ಸ್ಟೇಬಲ್ ಆತ್ಮಹತ್ಯೆ!

ಕುಂದಾಪುರ  ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್ ಬಳಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿಯನ್ನು ಉತ್ತರಕನ್ನಡ ಜಿಲ್ಲೆ ಕುಮಟಾ ಮೂಲದ ರಾಮ ಗೌಡ (32) ಎಂದು ಹೇಳಲಾಗಿದೆ. ಇವರು 2017ರಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದು, ಕಳೆದ 5 ವರ್ಷದಿಂದ ಕುಂದಾಪುರ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿದ್ದರು. ರಾಮ ಗೌಡ ಉತ್ತಮ ವಾಲಿಬಾಲ್ ಆಟಗಾರ ಆಗಿದ್ದು, ಆನ್‌ಲೈನ್ ಬೆಟ್ಟಿಂಗ್ ವಿಚಾರದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.ಕಳೆದ ನಾಲೈದು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿ ಠಾಣೆಯ ಕರ್ತವ್ಯಕ್ಕೆ ಗೈರಾಗಿದ್ದರು. ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಪತ್ತೆ ಮಾಡುವ ಕಾರ್ಯ ಕೂಡ ನಡೆಸಲಾಗಿತ್ತೆನ್ನಲಾಗಿದೆ. ಮಂಗಳವಾರ ಕಾನ್ ಸ್ಟೇಬಲ್ ಮೃತದೇಹ ಸಮುದ್ರ ತೀರದ ಪಾರ್ಕ್ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೊನ್ನಾವರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ

Exit mobile version