Site icon ಉಡುಪಿ ನ್ಯೂಸ್ ಪ್ಲಸ್

ಹಸಿರು ವಲಯ ನಿರ್ಮಾಣ, ಉದ್ಯೋಗಕ್ಕೆ ಆಗ್ರಹ ಫೆ. 5 ರಂದು ಸಂತ್ರಸ್ತ ಗ್ರಾಮಸ್ಥರಿಂದ ಎಮ್ಆರ್ ಪಿಲ್ ವಿರುದ್ದ ಮನೆ ಮನೆ ಪ್ರತಿಭಟನೆ

ಎಮ್ಆರ್ ಪಿಎಲ್ ಮೂರನೆ ಹಂತದ ಕೋಕ್ ಸಲ್ಫರ್ ಘಟಕದಲ್ಲಿ ಕಡಿಮೆ ಬಿದ್ದಿರುವ 27 ಎಕ್ರೆ ಹಸಿರು ವಲಯ ನಿರ್ಮಿಸಲು, ಕಂಪೆನಿಯ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸಲು, ಸುತ್ತಲ ಗ್ರಾಮಗಳಲ್ಲಿ ಉಂಟಾಗಿರುವ ಕೈಗಾರಿಕಾ ಮಾಲಿನ್ಯ ತಡೆಯಲು ದೃಢವಾದ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ, ಎಮ್ಆರ್ ಪಿಎಲ್ ಕಂಪೆನಿ ದುರ್ವರ್ತನೆಯನ್ನು ಖಂಡಿಸಿ ಫೆಬ್ರವರಿ 05 ನೇ ತಾರೀಖು ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮಗಳಲ್ಲಿ ‘ಮನೆ ಮನೆ ಪ್ರತಿಭಟನೆ’ ನಡೆಸಲಾಗುವುದು ಎಂದು ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ತಿಳಿಸಿದೆ‌. ಗ್ರಾಮದ ಜನವಸತಿಗೆ ತಾಗಿಕೊಂಡು, ಹಸಿರು ವಲಯ ನಿರ್ಮಿಸದೆ ಅಪಾಯಕಾರಿ ಕೋಕ್ ಸಲ್ಫರ್ ಘಟಕ ಸ್ಥಾಪಿಸಿರುವುದರಿಂದ ಸುತ್ತಲ ಗ್ರಾಮಗಳಲ್ಲಿ ಅಸಹನೀಯ ಪರಿಸ್ಥಿತಿ ಉಂಟಾಗಿದೆ. ಗ್ರಾಮಸ್ಥರು ರೋಗ ರುಜಿನಗಳಿಂದ ಬಳಲುತ್ತಿದ್ದಾರೆ. ಅಂತರ್ಜಲ ಹಾಳಾಗಿ ಬಾವಿಗಳ ನೀರು ಬಳಕೆಗೆ ಅನರ್ಹಗೊಂಡಿವೆ. ಶಬ್ದ, ವಾಯು ಮಾಲಿನ್ಯಗಳು ವಿಪರೀತವಾಗಿದೆ. ಇಂತಹ ಅಸಹನೀಯ ಮಾಲಿನ್ಯದ ವಿರುದ್ದ 2015, 16 ನೇ ಇಸವಿಯಲ್ಲಿ ಗ್ರಾಮಸ್ಥರು ತೀವ್ರರೀತಿಯ ಹೋರಾಟ ಸಂಘಟಿಸಿದ್ದರು. ಅದರ ಪರಿಣಾಮ ರಾಜ್ಯ ಸರಕಾರ ಆರು ಅಂಶಗಳ ಪರಿಹಾರ ಕ್ರಮಗಳನ್ನು ಕಾಲಮಿತಿಯಲ್ಲಿ ನಡೆಸಲು ಕಂಪೆನಿಗೆ ಆದೇಶಿಸಿತ್ತು. ಆರು ಅಂಶಗಳಲ್ಲಿ ಐದು ಅಂಶಗಳನ್ನು ಅರಬರೆಯಾಗಿ ಕಂಪೆನಿ ಜಾರಿಗೊಳಿಸಿದೆ. ಆದರೂ ಮಾಲಿನ್ಯದ ಪ್ರಮಾಣ ಕಡಿಮೆಯಾಗಿಲ್ಲ. ಆರು ಅಂಶಗಳಲ್ಲಿ ಪ್ರಧಾನವಾಗಿರುವ ಜನವಸತಿ ಭಾಗದಲ್ಲಿ 27 ಎಕರೆ ಹಸಿರು ವಲಯ ನಿರ್ಮಾಣವನ್ನು ಜಮೀನು ಗುರುತಿಸಿ ವರ್ಷಗಳು ದಾಟಿದರೂ ಆದೇಶವನ್ನು ಕಂಪೆನಿ ಜಾರಿಗೊಳಿಸದೆ ತಪ್ಪಿಸಿಕೊಳ್ಳುತ್ತಿದೆ. ಅದಲ್ಲದೆ ಕಂಪೆನಿಯ ನೇಮಕಾತಿಯಲ್ಲಿ ಸ್ಥಳೀಯರನ್ನು ಪೂರ್ತಿಯಾಗಿ ಹೊರಗಿಡಲಾಗುತ್ತಿದೆ.ಎಮ್ಅರ್ ಪಿಎಲ್ ಕಂಪೆನಿಯ ಇಂತಹ ಪರಿಸರ ವಿರೋಧಿ, ಸ್ಥಳೀಯರೊಂದಿಗಿನ ತಾರತಮ್ಯ, ದುರ್ವರ್ತನೆ ನೀತಿಯನ್ನು ಖಂಡಿಸಿ, ಹಸಿರು ವಲಯ ನಿರ್ಮಾಣ, ಮಾಲಿನ್ಯ ತಡೆಗಟ್ಟುವ ಆದೇಶದ ತಕ್ಷಣ ಜಾರಿಗೆ ಒತ್ತಾಯಿಸಿ, ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಾಗರಿಕ ಹೋರಾಟ ಸಮಿತಿ ನಿರ್ಧರಿಸಿದ್ದು. ಅದರಂತೆ ಫೆಬ್ರವರಿ 05 ರಂದು ಸುತ್ತಲ ಗ್ರಾಮಗಳಲ್ಲಿ ಮನೆ ಮನೆಗಳಲ್ಲಿ ಕುಟುಂಬ ಸಮೇತ ಪ್ರತಿಭಟನೆ ನಡೆಸಿ ಕಂಪೆನಿಗೆ ಪ್ರಬಲ ಎಚ್ಚರಿಕೆ ನೀಡಲಾಗುವುದು ಎಂದು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Exit mobile version