
ಬೆಳಗಾವಿ ಅಧಿವೇಶನದ ಸಿದ್ಧತೆಗೆ ಬರುತ್ತಿದ್ದ ಬೆಂಗಳೂರಿನ ಅಗ್ರಿಕಲ್ಚರ್ ರೂರಲ್ ಡೆವಲಪ್ಮೆಂಟ್ ಬ್ಯಾಂಕ್‌ಗೆ ಸೇರಿದ ಬೊಲೆರೊ ವಾಹನದ ಮುಂಭಾಗದ ಗಾಜು ಜಖಂಗೊಂಡಿತ್ತು. ಮರಾಠಿ ಭಾಷಿಕರು ಕಲ್ಲು ತೂರಾಟ ನಡೆಸಿ ಗಾಜು ಜಖಂಗೊಳಿಸಿದ್ದಾರೆಂದು ಚಾಲಕ ಚೇತನ್ ಪೊಲೀಸರಿಗೆ ದೂರು ನೀಡಿದ್ದ. ರಾತ್ರಿ 10:30ರ ಸುಮಾರಿಗೆ ಮರಾಠಿ ಮಾತನಾಡುತ್ತಿದ್ದ ಯುವಕರು ಕಲ್ಲು ತೂರಿದ್ದಾರೆಂದು ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಹಿರೇಬಾಗೇವಾಡಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಬೆಂಗಳೂರಿನಿಂದ ಬುಧವಾರ ಬೆಳಗ್ಗೆ 7.45ಕ್ಕೆ ಬೆಳಗಾವಿಯತ್ತ ಹೊರಟಿದ್ದ ಚಾಲಕ ಚೇತನ್ ಶಿಗ್ಗಾಂವ್ ತಾಲೂಕಿನ ತಡಸ ಗ್ರಾಮದ ಬಳಿ ಬಾರ್‌ವೊಂದರಲ್ಲಿ ಮದ್ಯಪಾನ ಮಾಡಿ, ಧಾರವಾಡ – ಹಿರೇಬಾಗೇವಾಡಿ ಟೋಲ್ ನಾಕಾ ಮಧ್ಯೆ ಸ್ಟೀಲ್ ಬಾರ್ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬೊಲೆರೊ ವಾಹನದ ಗಾಜು ಜಖಂಗೊಂಡಿದ್ದು, ಹಿರೇಬಾಗೇವಾಡಿ ಟೋಲ್‌ಗೇಟ್‌ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಮುಂಭಾಗದ ಗಾಜು ಜಖಂಗೊಂಡ ಬೊಲೆರೊ ವಾಹನ ಸಂಚರಿಸಿರುವ ದೃಶ್ಯ ಸೆರೆಯಾಗಿದೆ.ತನ್ನ ತಪ್ಪು ಗೊತ್ತಾದರೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಂಬ ಭಯದಿಂದ ಚಾಲಕ ಸುಳ್ಳು ದೂರು ನೀಡಿದ್ದ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ತಿಳಿಸಿದ್ದಾರೆ.
