ಪಡುಬಿದ್ರಿ: ‘ದಿನನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಲಭವಾಗಿ ಯಶಸ್ಸು ಪಡೆಯಬಹುದು’ ಎಂದು ವಿದ್ಯಾರ್ಥಿಗಳಿಗೆ ಐಎಎಸ್ ಅಧಿಕಾರಿ ಯತೀಶ್ ಕಿವಿಮಾತು ಹೇಳಿದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಗುರುವಾರ ಸೊಸೈಟಿಯ ವೈ.ಲಕ್ಷ್ಮಣ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಮಾಸ್ಟರ್ ಮೈಂಡ್’ ಡಿಜಿಟಲ್ ಕೈಪಿಡಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಅತಿ ಮುಖ್ಯವಾಗಿರುವ ಸಾಮಾನ್ಯ ಜ್ಞಾನವು ಪತ್ರಿಕೆಗಳ ಓದಿನಿಂದ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಪತ್ರಿಕೆಗಳು ಭಗವದ್ಗೀಯಂತೆ’ ಎಂದು ಅಭಿಪ್ರಾಯಪಟ್ಟರು. ‘ಯುಪಿಎಸ್‌ಸಿ, ಕೆಪಿಎಸ್‌ಸಿಯಂತಹ ಮಾನ್ಯತೆ ಹೊಂದಿರುವ ಸಂಸ್ಥೆಗಳು, ಸರ್ಕಾರದ ಉನ್ನತ ಸ್ಥಾನಗಳಿಗೆ ಸೂಕ್ತ ಅಧಿಕಾರಿಗಳನ್ನು ಆಯ್ಕೆ ಮಾಡುತ್ತವೆ. ಸರ್ಕಾರದ ನೀತಿ ನಿರೂಪಣೆಗಳಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮುನ್ನ ವಿದ್ಯಾರ್ಥಿಗಳಿಗೆ ಸ್ಪಷ್ಟ ಗುರಿ ಇರಬೇಕು. ಹಣ ಮಾಡುವ ಉದ್ದೇಶವಿದ್ದರೆ ಐಎಎಸ್, ಐಪಿಎಸ್‌ನಂತಹ ಹುದ್ದೆಗಳಿಗೆ ಬರುವ ಅಗತ್ಯವಿಲ್ಲ. ಜನರ ಹಾಗೂ ಸಮಾಜದ ಬಗ್ಗೆ ಕಾಳಜಿ ಇದ್ದವರು, ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮನಸ್ಥಿತಿ ಇರುವವರು ಬನ್ನಿ’ ಎಂದು ಕರೆ ನೀಡಿದರು. ಅಧಿಕಾರ ಪಡೆಯಲು ರಾಜಕೀಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರಮುಖವಾದ ಎರಡು ಮಾರ್ಗಗಳು. ರಾಜಕೀಯದಲ್ಲಿ ಎಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಆದರೆ, ಕಠಿಣ ಪರಿಶ್ರಮ ಹಾಕಿದರೆ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಬಹುದು ಎಂದು ಕಿವಿಮಾತು ಹೇಳಿದರು. ಯುಪಿಎಸ್‌ಸಿ ಐಎಎಸ್, ಐಪಿಎಸ್, ಐಆರ್‌ಎಸ್ ಹುದ್ದೆಗಳಿಗೆ ಮಾತ್ರವಲ್ಲ ಸೇನೆಯ ಉನ್ನತ ಹುದ್ದೆಗಳಿಗೂ ನೇಮಕಾತಿ ಮಾಡಿಕೊಳ್ಳುತ್ತದೆ. ಯುಪಿಎಸ್‌ಸಿ ಪರೀಕ್ಷೆಗೆ ಪ್ರತಿವರ್ಷ 12ರಿಂದ 13 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ 7ರಿಂದ 8 ಲಕ್ಷ ಮಂದಿ ಪರೀಕ್ಷೆ ಬರೆಯುತ್ತಾರೆ. ಇವರಲ್ಲಿ 500ರಿಂದ 600 ಮಂದಿ ಮಾತ್ರ ಆಯ್ಕೆಯಾಗುತ್ತಾರೆ. 180 ಮಂದಿ ಐಎಎಸ್, 200 ಮಂದಿ ಐಪಿಎಸ್ ಹುದ್ದೆಗಳಿಗೆ ಆಯ್ಕೆಯಾಗಿ, ಉಳಿದವರು ಇತರೆ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ಕಠಿಣ ಪರಿಶ್ರಮ, ಸ್ಪಷ್ಟ ಗುರಿ ಅಗತ್ಯ. ದಿನಕ್ಕೆ ಕನಿಷ್ಠ 8ರಿಂದ 10 ತಾಸು ಓದಬೇಕು. ಇಷ್ಟೆಲ್ಲ ಮಾಡಿಯೂ ಮೊದಲ ಯತ್ನದಲ್ಲೇ ಯಶಸ್ಸು ದಕ್ಕುತ್ತದೆ ಎಂಬ ಖಾತ್ರಿ ಇರುವುದಿಲ್ಲ ಎಂದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಲ್ಲಾಡಳಿತದಿಂದ ಉಚಿತ ತರಬೇತಿ ನೀಡಲಾಗುತ್ತದೆ. ಉಡುಪಿಯ ಡಿಜಿಟಲ್ ಗ್ರಂಥಾಲದಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಲು ಪ್ರತ್ಯೇಕ ವಿಭಾಗವೇ ಇದ್ದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ.ಸುಧೀರ್ ಕುಮಾರ್ ಮಾತನಾಡಿ, ‘ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಆಸಕ್ತಿ ತೋರದಿರುವುದು ಬೇಸರದ ಸಂಗತಿ. ಇದಕ್ಕೆ ಐಎಎಸ್, ಐಪಿಎಸ್‌ನಂತಹ ಹುದ್ದೆಗಳ ಮಹತ್ವದ ತಿಳಿವಳಿಕೆಯ ಕೊರತೆ ಕಾರಣ ಇರಬಹುದು. ಇನ್ನು ಮುಂದಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕರಾವಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿ’ ಎಂದು ಆಶಿಸಿದರು. ಪಡುಬಿದ್ರಿಯ ಸಾಗರ ವಿದ್ಯಾಮಂದಿರದ ಸಂಚಾಲಕ ಸುಕುಮಾರ್ ಶ್ರೀಯಾನ್ ಮಾತನಾಡಿ, ‘ರಾಷ್ಟ್ರೀಕೃತ ಬ್ಯಾಂಕ್‌ಗಳು ಮಾಡುವ ಸಾಧನೆಯನ್ನು ಮೀರಿಸುವಂತೆ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದೆ. ಸಂಸ್ಥೆಯ ಯಶಸ್ಸಿನ ಅಧ್ಯಕ್ಷ ಸುಧೀರ್ ಅವರ ಶ್ರಮ ಅಪಾರವಾಗಿದೆ’ ಎಂದರು. ಜೆಸಿಐ ಪಡುಬಿದ್ರಿ ಅಧ್ಯಕ್ಷ ಶರತ್ ಶೆಟ್ಟಿ ಮಾತನಾಡಿದರು. ಸುಚರಿತಾ ಎಲ್. ಅಮೀನ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಉಪಾಧ್ಯಕ್ಷ ಗುರುರಾಜ್ ಪೂಜಾರಿ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಚ್. ನಿಶ್ಮಿತಾ ಇದ್ದರು. ‘ಪಡುಬಿದ್ರಿ ಸೊಸೈಟಿ ಕಾರ್ಯ ಶ್ಲಾಘನೀಯ’ ಸಾಮಾನ್ಯವಾಗಿ ಸಹಕಾರ ಸಂಘಗಳು ಸಾರ್ವಜನಿಕರಿಗೆ ಸಾಲ ವಿತರಿಸಿ ಸಾಲ ವಸೂಲಿ ಮಾಡುತ್ತವೆ. ಆದರೆ, ಪಡುಬಿದ್ರಿಯ ಸಹಕಾರಿ ವ್ಯವಸಾಯಿಕ ಸೊಸೈಟಿ ಕಾರ್ಯವ್ಯಾಪ್ತಿ ಮೀರಿ ಈ ಭಾಗದ ಯುವಜನತೆ ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ. –ಯತೀಶ್, ಐಎಎಸ್ ಅಧಿಕಾರಿ ಯುಪಿಎಸ್‌ಸಿ ಪರೀಕ್ಷೆ ಹೇಗೆ ನಡೆಯತ್ತದೆ ? ಫೆಬ್ರುವರಿಯಲ್ಲಿ ಯುಪಿಎಸ್‌ಸಿ ಪರೀಕ್ಷೆ ನೋಟಿಫಿಕೇಷನ್ ಹೊರ ಬೀಳುತ್ತದೆ. ಜೂನ್‌ನಲ್ಲಿ ಪ್ರಿಲಿಮ್ಸ್ ಪರೀಕ್ಷೆ ನಡೆಯುತ್ತದೆ. 1:10 ಆಧಾರದಲ್ಲಿ ಮುಖ್ಯ ಪರೀಕ್ಷೆಗೆ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಮುಖ್ಯ ಪರೀಕ್ಷೆಯಲ್ಲಿ 7 ವಿಷಯಗಳು ಇರುತ್ತವೆ. ನಂತರ 1:3 ಆಧಾರದಲ್ಲಿ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ರ‍್ಯಾಂಕ್ ಪಟ್ಟಿ ಹೊರಬೀಳುತ್ತದೆ. ರ‍್ಯಾಂಕ್ ಅಧಾರದಲ್ಲಿ ಹುದ್ದೆಗಳು ಲಭ್ಯವಾಗುತ್ತವೆ
