ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪವಿತ್ರ ಸನ್ನಿಧಿಯಲ್ಲಿ ಲೋಕಕಲ್ಯಾಣ ಹಾಗೂ ಭಕ್ತರ ಶ್ರೇಯೋಭಿವೃದ್ಧಿಗಾಗಿ ಸೆಪ್ಟೆಂಬರ್ 24ರ ಗುರುವಾರ ಅಪರಾಹ್ನ 3 ಗಂಟೆಯಿಂದ ‘ಮಾತೃಕಾ ಶಕ್ತಿ ಪೂಜೆ’ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ದೇವಳದ ಪ್ರಧಾನ ತಂತ್ರಿಗಳಾದ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಅವರ ಮಾರ್ಗದರ್ಶನದಲ್ಲಿ ಹಾಗೂ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ. ಸಂಜೆ 3.30ಕ್ಕೆ ಸಾಮೂಹಿಕ ಪ್ರಾರ್ಥನೆ, 4 ಗಂಟೆಗೆ ದೀಪ ಬೆಳಗಿಸುವಿಕೆ, 4.30ಕ್ಕೆ ಸಭಾಕಾರ್ಯಕ್ರಮ ಹಾಗೂ ಸಂಜೆ 5.30ಕ್ಕೆ ಮಹಾ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಮಾಪನಗೊಳ್ಳಲಿದೆ.
ಸಭಾಕಾರ್ಯಕ್ರಮಕ್ಕೂ ಮುನ್ನ ಬೆಂಗಳೂರಿನ ಎಂ.ಆರ್.ಜಿ ಗ್ರೂಪ್‌ನ ಚೇರ್‌ಮನ್ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಕಾಪು ಕ್ಷೇತ್ರದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯ ಉದ್ದೇಶದಿಂದ ಸ್ಥಾಪಿಸಲಾಗಿರುವ ಕಾಪು ಚಾರಿಟೇಬಲ್ ಟ್ರಸ್ಟ್ (ರಿ.) ಅನ್ನು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ನವದುರ್ಗಾ ಲೇಖನ ಯಜ್ಞ ಸಮಿತಿ ವತಿಯಿಂದ ‘ಕಾಪುವಿನ ಅಮ್ಮನಿಗೊಂದು ಅಕ್ಷರ ನಮನ’ ಮಹಾ ಅಭಿಯಾನಕ್ಕೂ ಚಾಲನೆ ನೀಡಲಾಗುವುದು. 9 ದಿನಗಳ ಕಾಲ ನವದುರ್ಗೆಯರ ನಾಮಗಳನ್ನು ನವದುರ್ಗಾ ಲೇಖನ ಪುಸ್ತಕದಲ್ಲಿ ಬರೆದು ಅಮ್ಮನಿಗೆ ಸಮರ್ಪಿಸುವ ಭಕ್ತರಿಗೆ ಅಮ್ಮನ ಅನುಗ್ರಹ ಪ್ರಸಾದದೊಂದಿಗೆ ಅದೃಷ್ಟದ ಚೀಟಿ ನೀಡಲಾಗುವುದು. ಈ ಅವಕಾಶ 99 ದಿನಗಳವರೆಗೆ ಮಾತ್ರ ಇರಲಿದೆ.
ಲೇಖನ ಯಜ್ಞದಲ್ಲಿ ಭಾಗವಹಿಸುವ ಭಕ್ತರಲ್ಲಿ 9 ಮಂದಿಗೆ ಕಾಪು ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಲಾ 9 ಗ್ರಾಂ ತೂಕದ ಸ್ವರ್ಣ ಪದಕವನ್ನು ಅಮ್ಮನ ಪ್ರಸಾದ ರೂಪದಲ್ಲಿ ನೀಡಲಾಗುವುದು. ಒಬ್ಬರ ಹೆಸರಿನಲ್ಲಿ ಒಂದು ಲೇಖನ ಪುಸ್ತಕ ಬರೆಯಲು ಮಾತ್ರ ಅವಕಾಶವಿದೆ.
ನವದುರ್ಗಾ ಲೇಖನ ಯಜ್ಞದಡಿ ವಾಗ್ದೇವಿ ಶಾಶ್ವತ ಸೇವೆ ₹99,999, ನವಶಕ್ತಿ ಶಾಶ್ವತ ಸೇವೆ ₹9,999 ಹಾಗೂ ಮಾ-ತಂಗಿ ಶಾಶ್ವತ ಸೇವೆ ₹999 ಎಂದು ನಿಗದಿಪಡಿಸಲಾಗಿದೆ.
ಮಾತೃಕಾ ಶಕ್ತಿ ಪೂಜೆಯ ಸಂಕಲ್ಪದಲ್ಲಿ ಭಾಗವಹಿಸುವ ಮಹಿಳೆಯರು ಹಾಗೂ ಭಕ್ತರು ಮುಂಗಡವಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿದೆ.
‘ಅಮ್ಮನ ಸನ್ನಿಧಿಯಲ್ಲಿ ನಡೆಯುವ ಈ ಪವಿತ್ರ ಪೂಜೆಯಲ್ಲಿ ಭಾಗವಹಿಸಿ, ಮಾತೃಶಕ್ತಿಯ ಅನುಗ್ರಹಕ್ಕೆ ಪಾತ್ರರಾಗಿರಿ’ ಎಂದು ನವದುರ್ಗಾ ಲೇಖನ ಯಜ್ಞ ಸಮಿತಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ: 9481550999
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸೆ.24ರಂದು ‘ಮಾತೃಕಾ ಶಕ್ತಿ ಪೂಜೆ’; ಕಾಪು ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

