ಪಡುಬಿದ್ರಿ ಮತ್ತು ಸುತ್ತಮುತ್ತಲಿನ ಸಾರ್ವಜನಿಕರಿಗೆ ಅತ್ಯಾಧುನಿಕ ಹಾಗೂ ತ್ವರಿತ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ, ಇಲ್ಲಿನ ಸೌರಭ ಆಸ್ಪತ್ರೆಯು ಮಂಗಳೂರಿನ ಪ್ರಸಿದ್ಧ ಕೆಎಂಸಿ (KMC) ಆಸ್ಪತ್ರೆಯ ಸಹಯೋಗದೊಂದಿಗೆ 24 ಗಂಟೆಗಳ ತುರ್ತು ವೈದ್ಯಕೀಯ ಸೇವೆಗೆ (24×7 Emergency Services) ಸೆಪ್ಟೆಂಬರ್ 19ರಂದು ಅಧಿಕೃತ ಚಾಲನೆ ನೀಡಲಿದೆ.
ಸೆಪ್ಟೆಂಬರ್ 19ರಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಯು.ಟಿ. ಖಾದರ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸೌರಭ ಆಸ್ಪತ್ರೆಯ ಸಂಸ್ಥಾಪಕ ಡಾ. ಭವಾನಿ ಶಂಕರ್ ಇಂದು ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೌರಭ ಆಸ್ಪತ್ರೆಯಲ್ಲಿ ನೇತ್ರ, ಪ್ರಸೂತಿ ಮತ್ತು ಸ್ತ್ರೀರೋಗ, ಮಕ್ಕಳ ಹಾಗೂ ಸಾಮಾನ್ಯ ವೈದ್ಯಕೀಯ ವಿಭಾಗಗಳ ಹೊರರೋಗಿ ಸೇವೆಗಳ ಜೊತೆಗೆ 24×7 ತುರ್ತು ಮತ್ತು ಕ್ರಿಟಿಕಲ್ ಕೇರ್ ಘಟಕ, ICU, ಶಸ್ತ್ರಚಿಕಿತ್ಸಾ ಕೊಠಡಿ, ಹೆರಿಗೆ ಕೊಠಡಿ, ಎಕ್ಸ್-ರೇ, ರೋಗನಿರ್ಣಯ ಪ್ರಯೋಗಾಲಯ, ಔಷಧಾಲಯ, ಸ್ಕ್ಯಾನಿಂಗ್ ಮತ್ತು ಇಮೇಜಿಂಗ್ ಸೇವೆಗಳು ಲಭ್ಯವಿರಲಿವೆ.
ಇದಲ್ಲದೆ ಡೇ ಕೇರ್ ಘಟಕ, ಪುರುಷ ಮತ್ತು ಮಹಿಳೆಯರ ಸಾಮಾನ್ಯ ವಾರ್ಡ್‌ಗಳು, ವಿಶೇಷ ವಾರ್ಡ್ ಹಾಗೂ ಡಿಲಕ್ಸ್ ಕೊಠಡಿಗಳ ಸೌಲಭ್ಯವೂ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಸೌರಭ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ಸೌಮ್ಯ ಬಿ.ಎಸ್. ಮಾತನಾಡಿ, ಪಡುಬಿದ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಪಾರ್ಶ್ವವಾಯು, ಹೃದಯ ಸ್ತಂಭನ, ವಿಷ ಸೇವನೆ, ಮಕ್ಕಳ ತುರ್ತು ಪರಿಸ್ಥಿತಿ ಹಾಗೂ ರಸ್ತೆ ಅಪಘಾತಗಳಂತಹ ಪ್ರಕರಣಗಳು ಬರುತ್ತಿವೆ. ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ತಂಡದ ಸಹಯೋಗದಿಂದ ಇಂತಹ ರೋಗಿಗಳಿಗೆ ತ್ವರಿತ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡಲು ನೆರವಾಗಲಿದೆ ಎಂದರು.
ಗೋಲ್ಡನ್ ಅವರ್‌ನಲ್ಲಿ ಜೀವ ರಕ್ಷಕ ಚಿಕಿತ್ಸೆ
ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಸೌರಭ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ತುರ್ತು ಚಿಕಿತ್ಸಾ ಸೇವೆ ಲಭ್ಯವಾಗಲಿದೆ. ತರಬೇತಿ ಪಡೆದ ತುರ್ತು ಚಿಕಿತ್ಸಾ ತಜ್ಞರು ಅಪಘಾತ, ಹೃದಯ ಸಂಬಂಧಿ ಸಮಸ್ಯೆ, ನರರೋಗ, ಬಹು ಗಾಯಗಳು ಸೇರಿದಂತೆ ಗಂಭೀರ ತುರ್ತು ಪರಿಸ್ಥಿತಿಗಳಿಗೆ ತಕ್ಷಣ ಚಿಕಿತ್ಸೆ ನೀಡಲಿದ್ದಾರೆ.
ಅಪಘಾತ ಅಥವಾ ಇತರ ಗಂಭೀರ ತುರ್ತು ಪರಿಸ್ಥಿತಿಗಳಲ್ಲಿ ಅತ್ಯಂತ ಮಹತ್ವದ ‘ಗೋಲ್ಡನ್ ಅವರ್’ ಅವಧಿಯಲ್ಲೇ ಜೀವ ರಕ್ಷಕ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಆಧುನಿಕ ಜೀವ ರಕ್ಷಕ ಉಪಕರಣಗಳೊಂದಿಗೆ ಅಡ್ವಾನ್ಸ್ ಕಾರ್ಡಿಯಾಕ್ ಲೈಫ್ ಸಪೋರ್ಟ್ (ACLS) ಆಂಬ್ಯುಲೆನ್ಸ್ ಸೌಲಭ್ಯವೂ 24 ಗಂಟೆಯೂ ಲಭ್ಯವಿರಲಿದೆ ಎಂದು
ಕೆ ಎಂ ಸಿ ಆಸ್ಪತ್ರೆ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಲ್ ಮಂಗಳೂರು ಮಾರ್ಕೆಟಿಂಗ್ ವಿಭಾಗದ ಹಿರಿಯ ವ್ಯವಸ್ಥಾಪಕ ಶ್ರೀ ರಾಕೇಶ್ ದರ್ಶನ್
ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಕ್ಲಸ್ಟರ್ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣ ಮಾತನಾಡಿ, ಕುಂದಾಪುರ, ಪುತ್ತೂರು, ಕಕ್ಕಿಂಜೆ, ಬೆಳ್ತಂಗಡಿ ಹಾಗೂ ಕೇರಳದಲ್ಲಿರುವ ಕೆಎಂಸಿಯ ತುರ್ತು ಚಿಕಿತ್ಸಾ ಕೇಂದ್ರಗಳ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳು, ಪಾರ್ಶ್ವವಾಯು, ಅಪಘಾತ, ಬಹು ಗಾಯಗಳು, ಹಾವು ಕಡಿತ, ವಿಷ ಸೇವನೆ ಹಾಗೂ ಮಕ್ಕಳ ತುರ್ತು ಪ್ರಕರಣಗಳಿಗೆ ತಕ್ಷಣದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹೆಚ್ಚಿನ ವಿಶೇಷ ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಕೆಎಂಸಿ ಆಸ್ಪತ್ರೆ ಮಂಗಳೂರಿಗೆ ಸ್ಥಳಾಂತರಿಸಿ, ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರ ತಂಡದ ಮೂಲಕ ಮುಂದಿನ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದರು.
ಪಡುಬಿದ್ರಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನರಿಗೆ ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಸೌರಭ ಆಸ್ಪತ್ರೆ–ಕೆಎಂಸಿ ಸಹಯೋಗ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

