Site icon ಉಡುಪಿ ನ್ಯೂಸ್ ಪ್ಲಸ್

ರಾಷ್ಟ್ರೀಯ ಮಟ್ಟದ ತರಬೇತಿದಾರರ ತಂಡದಿಂದ ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ಸಂವಾದ

ಉಜಿರೆ, ಜುಲೈ 29: ರಾಷ್ಟ್ರೀಯ ರುಡ್‌ಸೆಟಿ ಅಕಾಡೆಮಿ ವತಿಯಿಂದ ಆಯೋಜಿಸಲಾದ “Entrepreneurship Development for Directors/Faculties of RSETIs” ತರಬೇತಿ ಕಾರ್ಯಕ್ರಮದ ಭಾಗವಾಗಿ ದೇಶದ ವಿವಿಧ ರಾಜ್ಯಗಳು ಹಾಗೂ ಬ್ಯಾಂಕುಗಳನ್ನು ಪ್ರತಿನಿಧಿಸಿದ 32 ನಿರ್ದೇಶಕರು ಮತ್ತು ಅಧ್ಯಾಪಕರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರುನ್ನು ಭೇಟಿ ಮಾಡಿ ಸಂವಾದ ನಡೆಸಿದರು.
ಜುಲೈ 20 ರಿಂದ ಆಗಸ್ಟ್ 1, 2026ರವರೆಗೆ ನಡೆಯುತ್ತಿರುವ ಈ ರಾಷ್ಟ್ರೀಯ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು. ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಯುಕೋ ಬ್ಯಾಂಕ್‌ನ ಅಧಿಕಾರಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಸಂವಾದದ ಸಂದರ್ಭದಲ್ಲಿ ಡಾ. ಹೆಗ್ಗಡೆಯವರು ಧರ್ಮಸ್ಥಳದ ಸೇವಾ ಪರಂಪರೆ, ಗ್ರಾಮೀಣಾಭಿವೃದ್ಧಿ, ಸ್ವ-ಉದ್ಯೋಗ ತರಬೇತಿ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಯ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು. ರುಡ್‌ಸೆಟ್ ಮತ್ತು ಆರ್‌ಸೆಟಿ ಸಂಸ್ಥೆಗಳು ದೇಶದ ನಿರುದ್ಯೋಗಿ ಯುವಜನರಿಗೆ ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆಯ ಮಾರ್ಗವನ್ನು ತೋರಿಸುತ್ತಿರುವ ಕುರಿತು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಭಾಗವಹಿಸಿದ್ದ ಅಧಿಕಾರಿಗಳು ಧರ್ಮಸ್ಥಳದ ಸಮಗ್ರ ಅಭಿವೃದ್ಧಿ ಮಾದರಿ, ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ರುಡ್‌ಸೆಟ್ ಸಂಸ್ಥೆಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು. ದೇಶದ ವಿವಿಧ ಭಾಗಗಳಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಧರ್ಮಸ್ಥಳದ ಅನುಭವಗಳು ಮಾರ್ಗದರ್ಶಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ..ವಿಜಯ ಕುಮಾರ್, ಉಪನ್ಯಾಸರಾದ ಲೋಹಿತ್ ಜೈನ್, ಅಬ್ರಹಾಂ ಜೇಮ್ಸ್, ಮತ್ತು ಸುರೇಶ್ ಗೌಡ ಉಪಸ್ಥಿತರಿದ್ದರು ‌ಹಾಗೂ ರಾಷ್ಟ್ರೀಯ ರುಡ್‌ಸೆಟಿ ಅಕಾಡೆಮಿಯ ಅಧಿಕಾರಿಗಳು ಹಾಗೂ ತರಬೇತಿ ಕಾರ್ಯಕ್ರಮದ ಸಂಯೋಜಕರು ಉಪಸ್ಥಿತರಿದ್ದರು. ಸಂವಾದವು ಪರಸ್ಪರ ಅನುಭವ ಹಂಚಿಕೆ, ಪ್ರಶ್ನೋತ್ತರ ಮತ್ತು ಮಾರ್ಗದರ್ಶನದೊಂದಿಗೆ ಅರ್ಥಪೂರ್ಣವಾಗಿ ನೆರವೇರಿತು.

Exit mobile version