ಕಾಪು ದಂಡತೀರ್ಥ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಯಲ್ಲಿ ರಾಜ್ಯಕ್ಕೆ ಮೂರನೆಯ ರ‍್ಯಾಂಕ್ ಪಡೆದ ಸಮರ್ಥ ಜೋಶಿ ಇವರನ್ನು ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಇವರು ಸನ್ಮಾನಿಸಿದರು.ಬಳಿಕ ಮಾತನಾಡಿ, ವಿದ್ಯಾರ್ಥಿಗಳು ಹೆತ್ತವರ ಹಾಗೂ ಶಿಕ್ಷಕರ ಮಾರ್ಗದರ್ಶನದೊಂದಿಗೆ ಪರಿಶ್ರಮಪಟ್ಟರೆ ಇಂತಹ ಸಾಧನೆ ಮಾಡಲು ಸಾಧ್ಯ.ಪ್ರಸ್ತುತ ಸಮಯದಲ್ಲಿ ವಿದ್ಯಾರ್ಥಿಗಳು ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗದೆ ಏಕಾಗ್ರತೆಯೊಂದಿಗೆ ಪಾಠದ ಕಡೆಗೆ ಗಮನಹರಿಸಬೇಕಾದ ಅವಶ್ಯಕತೆಯಿದ್ದು ,ಇದರಿಂದ ಪಡೆಯುವ ಸಫಲತೆ ಹೆತ್ತವರಿಗೆ ಹಾಗೂ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತರುತ್ತದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂಚಾಲಕರಾದ ಡಾ ll ಕೆ.ಪ್ರಶಾಂತ್ ಶೆಟ್ಟಿಯವರು ಸಮರ್ಥ ಜೋಶಿಯ ಸಾಧನೆ ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ,ಹೆತ್ತವರು ಹಾಗೂ ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಗೆ ಈ ರೀತಿ ಮಾರ್ಗದರ್ಶನ ನೀಡಿದಾಗ ಇಂತಹ ಅದ್ಭುತಗಳು ಸೃಜಿಸಲು ಸಾಧ್ಯ ಎಂದು ಹೇಳಿದರು.
ಪ್ರಾಂಶುಪಾಲರಾದ ನೀಲಾನಂದ ನಾಯ್ಕ್ ಇವರು ಹೆತ್ತವರಿಗೆ ಕಲಿಕೆ ಹಾಗೂ ಶೈಕ್ಷಣಿಕ ಮಾರ್ಗದರ್ಶನವನ್ನು ನೀಡಿದರು. ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಶಿಕ್ಷಣ ಸಂಯೋಜಕ ಶಿವಣ್ಣಬಾಯರ್,ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ರಾದ ಗೇಬ್ರಿಯಲ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ಎಸ್ಎಸ್ ಎಲ್ ಸಿ,ಹಾಗೂ ಪಿಯುಸಿ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಉಪನ್ಯಾಸಕಿ ರೋಶಲ್ ಡಿಸೋಜ ಇವರು ಪರಿಚಯಿಸಿದರು.
ಉಪನ್ಯಾಸಕ ಸುರಥ್ ಕುಮಾರ್ ಸ್ವಾಗತಿಸಿದರು.ಉಪನ್ಯಾಸಕಿಯರಾದ ಸುಷ್ಮಾ ಕೆ ಧನ್ಯವಾದವನ್ನು ನೀಡಿದರೆ, ಸುಮನ ದೇವಾಡಿಗ ನಿರೂಪಿಸಿದರು.
