Site icon ಉಡುಪಿ ನ್ಯೂಸ್ ಪ್ಲಸ್

SDPI ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ನಾಳೆ ಉಡುಪಿಗೆ — ಲೀಡರ್ಸ್ ಕಾಂಕ್ಲೇವ್ ಕಾರ್ಯಕ್ರಮದಲ್ಲಿ ಭಾಗಿ.

ಉಡುಪಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಝಿ ಅವರು ಏಪ್ರಿಲ್ 29ರಂದು (ನಾಳೆ) ಉಡುಪಿ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷರಾದ ಆಸಿಫ್ ಕೋಟೇಶ್ವರ ರವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಈಡಿ ದಾಖಲಿಸಿದ ಸುಳ್ಳು ಪ್ರಕರಣದ ಹಿನ್ನೆಲೆ ಸುಮಾರು 11 ತಿಂಗಳುಗಳ ಕಾಲ ಜೈಲಿನಲ್ಲಿ ಕಳೆದಿದ್ದರೂ, ಯಾವುದೇ ರೀತಿಯ ಹಿಂಜರಿತವಿಲ್ಲದೆ ಪಕ್ಷದ ಸಂಘಟನೆ ಬಲಪಡಿಸುವ ಹೋರಾಟವನ್ನು ಮುಂದುವರಿಸಿರುವ ಅವರು, ಜೈಲಿನಲ್ಲಿದ್ದ ಅವಧಿಯಲ್ಲೇ 2026–28ನೇ ಅವಧಿಗೆ ಮರುಭಾರಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಉಡುಪಿ ಜಿಲ್ಲೆಗೆ ಇದೇ ಮೊದಲ ಬಾರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಾದ್ಯಂತ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿ ಸ್ವಾಗತಕ್ಕೆ ಸಜ್ಜಾಗಿದ್ದು, ಈ ಭೇಟಿ ರಾಜಕೀಯವಾಗಿ ಮಹತ್ವದ ತಿರುವು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಏಪ್ರಿಲ್ 29ರಂದು ಉಡುಪಿ ನಗರದ ಹೋಟೆಲ್ ಮಣಿಪಾಲ್‌ ಇನ್ ನಲ್ಲಿ SDPI ಉಡುಪಿ ಜಿಲ್ಲಾ ನಾಯಕರ ಸಮಾವೇಶ “ಲೀಡರ್ಸ್ ಕಾನ್ಕ್ಲೇವ್” ಕಾರ್ಯಕ್ರಮ ಭವ್ಯವಾಗಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಝಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇದಲ್ಲದೆ, ಈ ಕಾರ್ಯಕ್ರಮದಲ್ಲಿ SDPI ರಾಷ್ಟ್ರೀಯ ಉಪಾಧ್ಯಕ್ಷರಾದ ಮುಹಮ್ಮದ್ ಶಫಿ (ರಾಜಸ್ಥಾನ್), ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ (ಮೈಸೂರು), ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ರಫ್ ಅಂಕಜಾಲ್, ರಿಯಾಝ್ ಫರಂಗಿಪೇಟೆ, ಇಲ್ಯಾಸ್ ಮುಹಮ್ಮದ್ ತುಂಬೆ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷರಾದ ಆಸಿಫ್ ಕೋಟೇಶ್ವರ ತಿಳಿಸಿದ್ದಾರೆ.

Exit mobile version