ಉಚ್ಚಿಲ: ಮೊಗವೀರ ಸಮಾಜದ ಒಗ್ಗಟ್ಟಿನ ಪ್ರತಿಫಲವಾಗಿ ಗುರು ಪಾದಕಾಣಿಕೆ ಸಮರ್ಪಣೆ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಅಭಿವೃದ್ದಿಯೇ ಮೂಲಮಂತ್ರವನ್ನಾಗಿಸಿಕೊ oಡು ಶ್ರೀಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೊನೆಯುಸಿರು ಇರುವವರೆಗೂ ಯಾವುದೇ ರಾಜಕೀಯ ರಹಿತ ಸಮಾಜಸೇವೆ ನಡೆಸಲು ಬದ್ಧನಿದ್ದೇನೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ, ಮೊಗವೀರ ಸಮಾಜದ ಯಶಸ್ಸಿನ ರೂವಾರಿ ನಾಡೋಜ ಡಾ.ಜಿ.ಶಂಕರ್ ಹೇಳಿದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೆ ಒಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ಭಾನುವಾರ ನಿರೀಕ್ಷೆಗೂ ಮೀರಿ 10 ಸಾವಿರಕ್ಕಿಂತಲೂ ಅಧಿಕ ಶ್ರದ್ಧಾಳುಗಳ ಸಮ್ಮುಖ ನಡೆದ ಸಮಾಜದ 9ನೇ ಕುಲಗುರುವರ್ಯರಾದ ಮಾಧವ ಮಂಗಲ ಪೂಜಾರ್ಯರ ಪುತ್ಥಳಿ ನಿರ್ಮಾಣದ ಪೂರ್ವಭಾವಿಯಾಗಿ ನಡೆದ ಸಾಮೂಹಿಕ ಪಾದಕಾಣಿಕೆ ಸಮರ್ಪಣೆ, ಬೈಕ್ ರ್ಯಾಲಿ ಹಾಗೂ ಶಾಲಿನಿ ಜಿ.ಶಂಕರ್ ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಗುರುಗಳ ಆಶೀರ್ವಾದ, ಸಾನಿಧ್ಯ, ಗುರುಬಲಗಳ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಸಮಾಜದ ಸರ್ವರೂ ಒಗ್ಗಟ್ಟಾಗಿ ನಾಡಿಗೇ ಮಾದರಿಯಾಗಿ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದು, ಬರುವ ದಸರಾ ಸಂಭ್ರಮದಲ್ಲಿ 30 ಅಡಿ ಎತ್ತರದ ಗುರುವರ್ಯರ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಗುವುದು. ಈ ಪುಣ್ಯ ಕಾರ್ಯದಲ್ಲಿ ಸಮಾಜದ ಸಹಕಾರ ಅಪ್ರತಿಮವಾದುದು. ಇದರ ಪ್ರತೀಕವಾಗಿ ಇಂದು ಒಂದೇ ದಿನ 2.5 ಕೋಟಿಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ ಎಂದರು.
ಸಮಾಜಸೇವೆ ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ. ಸರ್ವ ಸಮಾಜದ ಏಳಿಗೆಗೂ ಬದ್ದನಿದ್ದೇನೆ. ನನ್ನ ಬದುಕಿನ ಕೊನೆಯ ದಿನಗಳನ್ನು ಸರ್ವ ಸಮಾಜಕ್ಕೆ ಅರ್ಪಣೆ ಮಾಡುತ್ತಿದ್ದೇನೆ ಎಂದವರು ಭಾವುಕರಾಗಿ ನುಡಿದರು.

ಮುಖ್ಯ ಅತಿಥಿಯಾಗಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಭಾವನಾತ್ಮಕ ಕಾರ್ಯಕ್ರಮದಲ್ಲಿ ಸಮಾಜದ ಒಗ್ಗಟ್ಟು ಪ್ರತಿಫಲಿತವಾಗಿದೆ. ನಮ್ಮ ಕಾರ್ಯಗಳಿಗೆ ಸಿಗುವ ಯಶಸ್ಸಿಗೆ ಗುರು ಹಿರಿಯರ ಆಶೀರ್ವಾದವೇ ಕಾರಣ. ವಿಶ್ವವೇ ನಮ್ಮ ಕಡೆ ತಿರುಗಿ ನೋಡುವಂತೆ ಉಚ್ಚಿಲ ಕ್ಷೇತ್ರವು ವಿಶ್ವಪ್ರಸಿದ್ದಿ ಪಡೆದಿದೆ. ಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಸರಕಾರವು 25 ಕೋಟಿ ರೂ. ದೇಣಿಗೆ ನೀಡಿದ್ದು, ಈಗಿನ ಸರಕಾರವೂ 10 ಕೋಟಿ ರೂ. ದೇಣಿಗೆ ನೀಡುವ ನಿರೀಕ್ಷೆ ಇದೆ ಎಂದರು.
ಪ್ರಮುಖರಾದ ಪ್ರಸಾದ್ ಕಾಂಚನ್, ರಮೇಶ್ ಕಾಂಚನ್, ಮುಂಬಯಿ ಉದ್ಯಮಿ ವೇದಪ್ರಕಾಶ್ ಶ್ರೀಯಾನ್ ಮತ್ತು ಮಂಗಳೂರು ಮತ್ಯೋದ್ಯಮಿ ಶಶಿಕುಮಾರ್ ಬೇಂಗ್ರೆ ಮಾತನಾಡಿದರು.
ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಪ್ರಮುಖರಾದ ಮೋಹನ್ ಬೇಂಗ್ರೆ, ಹರಿಯಪ್ಪ ಕೋಟ್ಯಾನ್, ಯುವರಾಜ ಸಾಲ್ಯಾನ್, ರತ್ನಾಕರ ಸಾಲ್ಯಾನ್, ರಾಜೇಶ್ ಪುತ್ರನ್ (ಮಂಗಳೂರು ವಲಯ), ಪವನ್ ಆನಂದ್ ಎರ್ಮಾಳು (ಮಧ್ಯ ವಲಯ), ಸತೀಶ್ ಕುಂದರ್ (ಉಡುಪಿ ವಲಯ), ಸದಾನಂದ ಬಳ್ಕೂರು(ಬಗ್ವಾಡಿ ವಲಯ), ಗಿರಿಧರ ಸುವರ್ಣ, ರವಿ ಕರ್ಕೇರ ಸೌದಿ ಅರೇಬಿಯಾ, ಅಜಿತ್ ಸುವರ್ಣ, ಸದಾನಂದ ಬಂಗೇರ, ಬೇಬಿ ಸಾಲ್ಯಾನ್, ಸಂಧ್ಯಾದೀಪ ಸುನಿಲ್, ಭಾಸ್ಕರ ಸಾಲ್ಯಾನ್, ಶ್ರೀನಿವಾಸ ತೀರ್ಥಹಳ್ಳಿ, ಅನಿಲ್ ಕುಮಾರ್ ಬೊಕ್ಕಪಟ್ಣ, ವರದರಾಜ್ ಬಂಗೇರ, ಚೇತನ್ ಬೇಂಗ್ರೆ, ನಾಗೇಶ್ ಪುತ್ರನ್, ನಾರಾಯಣ ಕರ್ಕೇರ, ನಾಗರಾಜ್, ಕರುಣಾಕರ್, ಕೃಷ್ಣ ಕೋಟ್ಯಾನ್, ಹರಿಶ್ಚಂದ್ರ ಸಾಲ್ಯಾನ್, ಸಾಧು ಸಾಲ್ಯಾನ್, ದಿನೇಶ್ ಎರ್ಮಾಳು, ಕವಿತಾ ಶರತ್, ಸುಗುಣಾ ಮೂಳೂರು, ಮನೋಜ್ ಕಾಂಚನ್ ಕಾಪು, ಸತೀಶ್ ಅಮೀನ್ ಬೆಣ್ಣೆಕುದ್ರು, ರವೀಶ್ ಕೊರವಡಿ, ಲಕ್ಷ್ಮಣ ಅಮೀನ್, ದಯಾಕರ ಸುವರ್ಣ, ಯಜೇಶ್ ಕರ್ಕೇರ ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಸ್ವಾಗತಿಸಿದರು. ಗುರುಪಾದ ಕಾಣಿಕೆ ಸಮರ್ಪಣಾ ಸಮಿತಿ ಅಧ್ಯಕ್ಷ ಮನೋಜ್ ಸಾಲ್ಯಾನ್ ಉಳ್ಳಾಲ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ಕಾರ್ಯಕ್ರಮ ನಿರ್ವಹಿಸಿದರು. ಉದಯ ಕುಮಾರ್ ಹಟ್ಟಿಯಂಗಡಿ ವಂದಿಸಿದರು.
ಪಾದಕಾಣಿಕೆಗೆ ದೇಣಿಗೆ: ಬಾರ್ಕೂರು ವಲಯದಿಂದ 35 ಲಕ್ಷ ರೂ., ಮಂಗಳೂರು ವಲಯದಿಂದ 25 ಲಕ್ಷ ರೂ., ಮಧ್ಯ ವಲಯದಿಂದ 25 ಲಕ್ಷ ರೂ., ಉಡುಪಿ ವಲಯದಿಂದ 25 ಲಕ್ಷ ರೂ., ಬಗ್ವಾಡಿ ವಲಯದಿಂದ 25 ಲಕ್ಷ ರೂ. ದೇಣಿಗೆ ನೀಡಲಾಗಿದ್ದು, ವೇದಿಕೆಯಲ್ಲಿ ಅವರನ್ನು ಗೌರವಿಸಲಾಯಿತು.ಈ ಸಂದರ್ಭ ವೈಯಕ್ತಿಕವಾಗಿ 25 ಸಾವಿರ ರೂ.ಯಿಂದ 10 ಲಕ್ಷ ರೂ. ವರೆಗಿನ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು.
ಗಮನ ಸೆಳೆದ ಶಿಸ್ತುಬದ್ದ ಬೈಕ್ ರ‍್ಯಾಲಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪ್ರತಿಮೆ ಪೂರ್ವಭಾವಿಯಾಗಿ ಭಾನುವಾರ ಹಮ್ಮಿಕೊಂಡ ಸುಮಾರು 2,500ಕ್ಕೂ ಅಧಿಕ ಪುರುಷ, ಮಹಿಳೆಯರ ಶಿಸ್ತುಬದ್ಧ ಬೈಕ್ ರ‍್ಯಾಲಿ ಎಲ್ಲರ ಗಮನ ಸೆಳೆಯಿತು.
ರಾ.ಹೆ. 66ರ ಪಾಂಗಾಳ ಶ್ರೀ ಜನಾರ್ದನ ದೇವಳ ಬಳಿ ಪ್ರಾರಂಭ ಗೊಂಡ ಬೈಕ್ ರ‍್ಯಾಲಿಗೆ ನಾಡೋಜ ಡಾ.ಜಿ.ಶಂಕರ್ ಮತ್ತು ಶಾಲಿನಿ జి. ಶಂಕರ್ ಚಾಲನೆ ನೀಡಿದರು. ಹೆಜಮಾಡಿ ಟೋಲ್ ಗೇಟ್ ಬಳಿ ಪ್ರಾರಂಭಗೊಂಡ ಬೈಕ್ ರ‍್ಯಾಲಿಗೆ ಜಯ ಸಿ ಕೋಟ್ಯಾನ್, ವೇದಪ್ರಕಾಶ್ ಶ್ರೀಯಾನ್ ಮತ್ತು ಮೋಹನ್ ಬೆಂಗ್ರೆ ಹಸಿರು ನಿಶಾನೆ ತೋರಿಸಿದರು.
ಹೆದ್ದಾರಿಯ ಉತ್ತರ ಮತ್ತು ದಕ್ಷಿಣದಿಂದ ಏಕಕಾಲಕ್ಕೆ ಪ್ರಾರಂಭಗೊಂಡ ಬೈಕ್ ರ‍್ಯಾಲಿಗೆ ಪೊಲೀಸ್ ಬೆಂಗಾವಲಿನೊಂದಿಗೆ ಶಿಸ್ತುಬದ್ಧವಾಗಿ ಸಾಗಿ ಏಕಕಾಲದಲ್ಲಿ ಉಚ್ಚಿಲ ಕ್ಷೇತ್ರವನ್ನು ತಲುಪಿತು. ಹೆದ್ದಾರಿಯ ಇಕ್ಕೆಲಗಳಲ್ಲಿ ರ‍್ಯಾಲಿಗಳಲ್ಲಿ ಭಾಗವಹಿಸಿದವರಿಗೆ ಹುರಿದುಂಬಿಸಿದರು. ಶಿಸ್ತುಬದ್ದ ಮಹಿಳೆಯ ಬೈಕ್ ರ‍್ಯಾಲಿಗೆ ಎಲ್ಲರು ಪ್ರಶಂಸಿದರು.
ಪಾದಕಾಣಿಕೆ ಸಮರ್ಪಣೆಗೆ ಚಾಲನೆ: ಕುಲ ಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪ್ರತಿಮೆ ಪ್ರತಿಷ್ಟಾಪನಾ ಸನ್ನಿಧಿಯಲ್ಲಿ ವಿಶೇಷ ಪೂಜಾವಿಧಿಗಳನ್ನು ಪೂರೈಸಿದ ಬಳಿಕ ಸಾಮೂಹಿಕ ಗುರು ಪಾದಕಾಣಿಕೆ ಸಮರ್ಪಣೆಗೆ ನಾಡೋಜ ಡಾ.ಜಿ.ಶಂಕರ್, ಶಾಲಿನಿ ಜಿ.ಶಂಕರ್, ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಚಾಲನೆ ನೀಡಿದರು.
ಭಜನಾ ಕಾರ್ಯಕ್ರಮಕ್ಕೆ ಚಾಲನೆ: ದೇವಳದ ಪ್ರಾಂಗಣದಲ್ಲಿ ನಡೆದ ನಿರಂತರ ಭಜನಾ ಕಾರ್ಯಕ್ರಮಕ್ಕೆ ಶಾಲಿನಿ ಜಿ.ಶಂಕರ್ ಚಾಲನೆ ನೀಡಿ ಶುಭ ಹಾರೈಸಿದರು.
ಉಪ್ಪಳದಿಂದ ಶಿರೂರುವರೆಗಿನ ಮೊಗವೀರ ಸಮಾಜದ 10 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿ ಗುರು ಪಾದಕಾಣಿಕೆ ಸಮರ್ಪಿಸಿ ಧನ್ಯರಾದರು. ಮಹಾ ಅನ್ನಸಂತರ್ಪಣೆಯೂ ಯಶಸ್ವಿಯಾಗಿ ನಡೆಯಿತು.