Site icon ಉಡುಪಿ ನ್ಯೂಸ್ ಪ್ಲಸ್

ಸಹಕಾರಿ ಧುರೀಣ ಕಾಪು ದಿವಾಕರ್ ಶೆಟ್ಟಿ ಮನೆಯಲ್ಲಿ ಕಳ್ಳತನ

ಉಡುಪಿ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಸಹಕಾರಿ ಧುರೀಣ ಕಾಪು ದಿವಾಕರ್ ಶೆಟ್ಟಿ ಅವರ ನಿವಾಸದಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ದಿವಾಕರ್ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಮುಂಬೈಗೆ ತೆರಳಿದ್ದ ಸಂದರ್ಭದಲ್ಲಿ, ಮನೆಯ ಉಸ್ತುವಾರಿಯನ್ನು ಪುರಸಭಾ ಸದಸ್ಯ ಸುರೇಶ್ ಶೇರಿಗಾರ್ ಅವರಿಗೆ ವಹಿಸಲಾಗಿತ್ತು. ಗುರುವಾರ ರಾತ್ರಿ ಸುರೇಶ್ ಶೇರಿಗಾರ್ ಅವರು ಮನೆಯ ಮೇಲ್ಮಹಡಿಯಲ್ಲಿ ಮಲಗಿದ್ದ ವೇಳೆ, ಮುಸುಕುಧಾರಿಗಳಾಗಿ ಬಂದ ಕಳ್ಳರು ಮನೆಯ ಮುಖ್ಯ ಬಾಗಿಲು ಮುರಿದು ಒಳನುಗ್ಗಿ ನಗದು ಹಣವನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ.

ಕಳ್ಳರು ಕೃತ್ಯ ನಡೆಸುವ ಸಂದರ್ಭದಲ್ಲಿ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನೂ ಪುಡಿಗೈದಿದ್ದು, ಸಾಕ್ಷ್ಯ ನಾಶಪಡಿಸುವ ಯತ್ನ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರು ಕೂಡ ಸ್ಥಳದಲ್ಲಿ ಪರಿಶೀಲನೆ ಕೈಗೊಂಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

Exit mobile version