ವಿಶ್ವದ ಮಹಾನ್ ಪ್ರವಾದಿಗಳಾದ ಯೇಸುಕ್ರಿಸ್ತ, ಮಹಮ್ಮದ್ ಪೈಗಂಬರ್, ನಾರಾಯಣ ಗುರುಗಳು ಮಾನವ ಕುಲಕ್ಕೆ ನೀಡಿರುವ ಸಂದೇಶ – ಶಾಂತಿ, ಸಾಮರಸ್ಯ ಮತ್ತು ಪ್ರೀತಿಯಿಂದ ಕೂಡಿದ ಸಹಬಾಳ್ವೆ ಎಂಬುದು ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದರು.
ಅವರು, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಹಯೋಗದಲ್ಲಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ” ಸೌಹಾರ್ದ ಕ್ರಿಸ್ಮಸ್ ಆಚರಣೆ ” ಕಾರ್ಯಕ್ರಮ ದಲ್ಲಿಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಪ್ರೀತಿ, ಸಹಬಾಳ್ವೆ ಮತ್ತು ಶಾಂತಿಯ ಬೆಳಕನ್ನು ವಿಶ್ವಕ್ಕೆ ಪಸರಿಸಿದ ಯೇಸುಕ್ರಿಸ್ತನ ಜೀವನವು ಸಾರ್ವಕಾಲಿಕ ಆದರ್ಶಪ್ರಾಯವಾಗಿದೆ.
ಪ್ರಸಕ್ತ ದೇಶದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ಮತ್ತು ಜಾತಿ – ಧರ್ಮಗಳ ನಡುವೆ ನಡೆಯುತ್ತಿರುವ ಅಹಿತಕರ ವಿದ್ಯಮಾನಗಳನ್ನು ಅವಲೋಕಿಸಿದಾಗ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಅಪಾಯದಲ್ಲಿದೆ ಎಂದನಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷವು ಸಂವಿಧಾನ ವನ್ನು ಪರಮ ಗ್ರಂಥವಾಗಿ ಗೌರವಿಸಿ, ಸ್ವೀಕರಿಸಿ, ಪಾಲಿಸುತ್ತಾ ಬಂದಿರುವ ಏಕೈಕ ರಾಜಕೀಯ ಪಕ್ಷವಾಗಿದ್ದು, ಸದಾ ಶಾಂತಿ, ಸಾಮರಸ್ಯ, ಸಹಬಾಳ್ವೆ ಮತ್ತು ಜಾತ್ಯಾತೀತತೆಯನ್ನು ಮೂಲಮಂತ್ರವಾಗಿ ಅಳವಡಿಸಿಕೊಂಡು ದೇಶದ ಮತ್ತು ಜನತೆಯ ಏಳಿಗೆಗಾಗಿ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ, ದೇಶ ಕಂಡ ಅತ್ಯುತ್ತಮ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ದಿ. ಡಾ. ಮನ್ಮೋಹನ್ ಸಿಂಗ್ ರವರ ಪುಣ್ಯತಿಥಿಯ ಪ್ರಯುಕ್ತ, ದೇಶಕ್ಕಾಗಿ ಅವರು ನೀಡಿರುವ ಸೇವೆ, ಕ್ರಾಂತಿಕಾರಿ ಯೋಜನೆಗಳು, ಕಾರ್ಯಕ್ರಮಗಳನ್ನು ಸ್ಮರಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಶಿಕ್ಷಕ ಮತ್ತು ಸುದ್ದಿ ಮಾಧ್ಯಮದ ನಿರೂಪಕ ಆಲ್ವಿನ್ ದಾಂತಿ ಯವರು, ಮಾತನಾಡಿ, ಹಿಂದು, ಮುಸ್ಲಿಂ ಕ್ರೈಸ್ತ ಧರ್ಮದ ಮೂಲ ಸಂದೇಶವು ಒಂದೇ ಆಗಿರುತ್ತದೆ. ಶಾಂತಿ, ಸಾಮರಸ್ಯ ಮತ್ತು ಸಹಬಾಳ್ವೆಯ ಬದುಕು.
ಮಾನವನು, ತಾನು ಇದೇ ತತ್ವದಡಿಯಲ್ಲಿ ಬದುಕಿ ಪರರಿಗೂ ಇದೇ ರೀತಿಯಲ್ಲಿ ಬದುಕಲು ಅವಕಾಶ ಕಲ್ಪಿಸಿದಲ್ಲಿ ನಮ್ಮ ದೇಶವು ಶಾಂತಿಯ ಹೂದೋಟ ವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ, ದೇಶದಲ್ಲಿ ಪ್ರಸಕ್ತ ವಾತಾವರಣವು ಇದಕ್ಕೆ ವ್ಯತಿರಿಕ್ತವಾಗಿರುವುದು ಆತಂಕದ ವಿಚಾರ ಎಂದರು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಂ. ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಕಾಪು ದಿವಾಕರ್ ಶೆಟ್ಟಿ ಮಾತನಾಡಿ ಶುಭಾಶಯ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೈ. ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಂತಲತಾ ಎಸ್. ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪಕ್ಷದ ಪ್ರಮುಖರಾದ ನವೀನ್ ಚಂದ್ರ ಸುವರ್ಣ, ಗೋಪಾಲ್ ಪೂಜಾರಿ ಪಲಿಮಾರು, ಪ್ರಶಾಂತ್ ಜತ್ತನ್ನ, ಶರ್ಫುದ್ದೀನ್ ಶೇಖ್, ಹಸನಬ್ಬ ಶೇಖ್, ನಿಯಾಜ್ ಪಡುಬಿದ್ರಿ, ಪಕ್ಷದ ವಿವಿಧ ಘಟಕ / ಸಮಿತಿಗಳ ಪದಾಧಿಕಾರಿಗಳು, ಪುರಸಭಾ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಅಶ್ವಿನಿ ಬಂಗೇರ ಸ್ವಾಗತಿಸಿ, ತಸ್ನಿನ್ ಆರಾ ವಂದಿಸಿದರು.
ಕಾಪು ಕಾಂಗ್ರೆಸ್ ನಿಂದ ಸೌಹಾರ್ದ ಕ್ರಿಸ್ಮಸ್ ಆಚರಣೆ

