Site icon ಉಡುಪಿ ನ್ಯೂಸ್ ಪ್ಲಸ್

ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರ ರೆಸಾರ್ಟಿನಲ್ಲಿ ಅಕ್ರಮ ವಲಸಿಗರು ಪತ್ತೆ ಪ್ರಕರಣ: ಕೂಲಂಕುಶ ಹಾಗೂ ನಿಷ್ಪಕ್ಷಪಾತ ತನಿಖೆಗೆ ಎಸ್ ಡಿ ಪಿ ಐ ಆಗ್ರಹ

ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮಾಲಿಕತ್ವದ ರೆಸಾರ್ಟಿನಲ್ಲಿ ಅಕ್ರಮ ವಿದೇಶಿ ವಲಸಿಗರಿಗೆ ಕೆಲಸವನ್ನು ನೀಡುವ ಮೂಲಕ ಆಶ್ರಯ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ದೇಶದ ಭದ್ರತೆಗೆ ಸವಾಲಾಗಬಲ್ಲ ಈ ಪ್ರಕರಣವನ್ನು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೂಲಂಕುಶ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಇದರ ಹಿಂದಿರುವ ಷಡ್ಯಂತರವನ್ನು ಬಯಲಿಗೆಲೆಯಬೇಕು ಎಂದು ಎಸ್ಡಿಪಿಐ ಉಡುಪಿ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾಗಿರುವ ಅಬ್ದುಲ್ ರಹೀಮ್ ರವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ಸಾರ್ವಜನಿಕ ವೇದಿಕೆಗಳಲ್ಲಿ ದೇಶಪ್ರೇಮದ, ದೇಶದ ಭದ್ರತೆಯ ಬಗ್ಗೆ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರು ತಮ್ಮ ಸೂರುಗಳಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿರುವುದು ಇವರ ಡೋಂಗಿ ದೇಶಪ್ರೇಮವನ್ನು ಸಾಬೀತುಪಡಿಸುತ್ತದೆ.

ಒಂದು ವೇಳೆ ಬೇರೆ ಪಕ್ಷದವರ ಅಥವಾ ಬೇರೆ ಧರ್ಮದವರ ರೆಸಾರ್ಟ್ಗಳಲ್ಲಿ ಅಕ್ರಮ ವಲಸಿಗರು ಪತ್ತೆಯಾಗುತ್ತಿದ್ದರೆ ಸ್ವಯಂಘೋಷಿತ ದೇಶಪ್ರೇಮಿಗಳ ಚೀರಾಟ ರಂಪಾಟ ಮಿತಿಮೀರುತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಶಾಸಕರ ಮೌನ ಧರ್ಮ ರಕ್ಷಣೆ, ದೇಶಪ್ರೇಮ ಇವೆಲ್ಲವೂ ಕೇವಲ ಅಧಿಕಾರ ಹಿಡಿಯಲು ಇವರಿಗೆ ಬೇಕಾಗಿರುವ ಮೆಟ್ಟಿಲುಗಳೇ ಹೊರತು ಬೇರೇನೂ ಅಲ್ಲ ಎನ್ನುವುದನ್ನು ಮತ್ತೆ ಸಾಬೀತುಪಡಿಸುತ್ತಿದೆ.

ಬ್ರಹ್ಮಾವರದಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ವಲಸಿಗರು ಯಾರು, ಎಷ್ಟು ಸಮಯದಿಂದ ಇಲ್ಲಿ ವಾಸವಾಗಿದ್ದಾರೆ, ಇವರನ್ನು ಇಲ್ಲಿ ಕೆಲಸಕ್ಕೆ ಇಟ್ಟಿರುವ ಉದ್ದೇಶ ಏನು ಹಾಗೂ ಇವರ ಹಿಂದೆ ಯಾರೆಲ್ಲ ಇದ್ದಾರೆ ಮತ್ತು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರು ನಡೆಸುವ ರೆಸಾರ್ಟ್ ನಲ್ಲಿ ಯಾವೆಲ್ಲ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎನ್ನುವುದನ್ನು ಕೂಲಂಕುಶವಾಗಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್ ಡಿ ಪಿ ಐ ಉಡುಪಿ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾದ ರಹೀಮ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

Exit mobile version