ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ವಿವಿಧ ಅಭೂತಪೂರ್ವ ಜನಪರ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ನುಡಿದಂತೆ ನಡೆಯುತ್ತಿದೆ. ಆದರೆ, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಬಗ್ಗೆಯಾಗಲಿ ಅಥವಾ ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದರಲ್ಲಿ ಜಿಲ್ಲಾಡಳಿತ ಮತ್ತು ಅದರ ಕೆಲವೊಂದು ಪ್ರಮುಖ ಜವಾಬ್ದಾರಿಯುತ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ ಧೋರಣೆ, ಪಕ್ಷಪಾತ ನೀತಿ ಕಾರ್ಯವೈಖರಿಯ ಬಗ್ಗೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಅಸಮಾಧಾನ ವ್ಯಕ್ತಪಡಿಸಿದರು.
ಅವರು, ಕಾಪು – ರಾಜೀವ್ ಭವನ ದಲ್ಲಿ ನಡೆದ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವ ಜವಾಬ್ದಾರಿ ಸಂಬಂಧ ಪಟ್ಟ ಜಿಲ್ಲೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡುತ್ತಾರೆ ಎನ್ನುವ ನಂಬಿಕೆಯಿಂದ ಪಕ್ಷದ ಕಾರ್ಯಕರ್ತರು ಸುಮ್ಮನಿದ್ದರೆ, ಎಲ್ಲಾ ಯೋಜನೆಗಳು ಮತ್ತು ಸೌಲಭ್ಯಗಳು ನೀರಿನಲ್ಲಿ ಮಾಡಿದ ಹೋಮದಂತಾಗಬಹುದು.
ಕಟಪಾಡಿಯಲ್ಲಿ ನಿರ್ಮಾಣ ಗೊಳ್ಳಲಿರುವ ಓವರ್ ಪಾಸ್ ಸೇತುವೆ ಕಾಮಗಾರಿ ನಿಮಿತ್ತ ಮಾಡಲಾಗಿರುವ ಪರ್ಯಾಯ ಸಂಚಾರ ಮಾರ್ಗದ ಬಗ್ಗೆ ನಿರ್ಧರಿಸುವ ಸಂದರ್ಭದಲ್ಲಿ ಸಾರ್ವಜನಿಕ ರನ್ನಾಗಲಿ ಅಥವಾ ಸ್ಥಳೀಯ ಮುಖಂಡರನ್ನಗಲೀ ಸಮಾಲೋಚನೆ ಸಭೆಗೆ ಕರೆಯದೆ, ಏಕಾಏಕಿ ಬದಲಿ ಮಾರ್ಗ ಸೂಚಿಸಿರುವುದು ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ತೋರಿಸುತ್ತದೆ. ಹಾಗಾಗಿ, ಕಾಂಗ್ರೆಸ್ ಕಾರ್ಯಕರ್ತರು ಎಚ್ಚೆತ್ತು, ಪಂಚ ಗ್ಯಾರಂಟಿ ಯೋಜನೆಗಳ ಸಹಿತ, ವಿವಿಧ ಸರ್ಕಾರಿ ಸೌಲಭ್ಯಗಳ ಪ್ರಯೋಜನವನ್ನು ಜನರಿಗೆ ಮನವರಿಕೆ ಮಾಡಿ, ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೂತ್ ಮಟ್ಟದಲ್ಲಿ ಜನರ ಬಳಿಗೆ ತೆರಳಿ ಸಹಕರಿಸಬೇಕು. ಮುಂದುವರಿದು, ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರು ಪಕ್ಷ ನಿಷ್ಠೆ ಮತ್ತು ಬದ್ಧತೆಯೊಂದಿಗೆ ಕಾರ್ಯಕ್ರಮ ನಿರ್ವಹಿಸುವುದಕ್ಕಿಂತ ಪ್ರಬಲವಾದ ಶಕ್ತಿ ಇನ್ನೊಂದಿಲ್ಲ. ಇದು ಪಕ್ಷಕ್ಕೆ ಕಾರ್ಯಕರ್ತರು ನೀಡುವ ಬಹುದೊಡ್ಡ ಕೊಡುಗೆ ಎಂದರು.
ಮುಂಬರುವ ಪಂಚಾಯತ್ ಚುನಾವಣೆಗಳು ಅತ್ಯಂತ ಪ್ರಾಮುಖ್ಯವಾಗಿದ್ದು, ಯಾವುದೇ ರೀತಿಯಲ್ಲಿ ಲಘುವಾಗಿ ಪರಿಗಣಿಸದೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ, ವಿಪಕ್ಷದ ಯಾವುದೇ ರೀತಿಯ ತಂತ್ರ – ಕುತಂತ್ರ, ಬೆದರಿಕೆಗಳಿಗೆ ಹೆದರದೆ ನಿರ್ಭಿತರಾಗಿ ಕೆಲಸ ಮಾಡಬೇಕು, ಕಾಂಗ್ರೆಸ್ ಪಕ್ಷ ಸದಾ ಕಾರ್ಯಕರ್ತರ ಬೆನ್ನಿಗಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ರವರು ಮಾತನಾಡಿ, ಜಿಲ್ಲೆಯಲ್ಲಿ ಒಂದೇ ಒಂದು ಕಾಂಗ್ರೆಸ್ ಶಾಸಕರು ಚುನಾಯಿತಾರಾಗದಿರುವುದರಿಂದ ಇಲ್ಲಿ ಕಾಂಗ್ರೆಸ್ ಪಕ್ಷವು, ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಬೇಕು. ಶಾಸಕರುಗಳ ತಾರತಮ್ಯ ಧೋರಣೆ, ಅವ್ಯವಹಾರ ಮತ್ತು ಅಭಿವೃದ್ಧಿ ಶೂನ್ಯ ಮನಸ್ಥಿತಿಯ ಬಗ್ಗೆ ಪ್ರತಿಭಟಿಸಬೇಕು, ಹೋರಾಟ ಕೈಗೊಳ್ಳಬೇಕು. ಈ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಲ್ಲಿ, ತಾನು ಕೂಡ ಸದಾ ನಿಮ್ಮೊಂದಿಗಿದ್ದು ಬೆಂಬಲಿಸುತ್ತೇನೆ ಎಂದರು.
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ದೆಯವರು ಮಾತನಾಡಿ, ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನೆಲ್ಲ ಘನತೆಯನ್ನು ಕಳೆದುಕೊಂಡಿದೆ, ಪ್ರಧಾನಿ ಮೋದಿಯವರು ಅಮೇರಿಕಾದ ಅಧ್ಯಕ್ಷ ಟ್ರಾಂಪ್ ಕೈಗೊಂಬೆ ಯಾಗಿ ವರ್ತಿಸುತ್ತಿರುವ ಬಗ್ಗೆ ಮತ್ತು ದೇಶದ ವಾಯುಯಾನ ಸಂಚಾರ ಅವ್ಯವಸ್ಥೆಯಿಂದಾಗಿ ಇಡೀ ವಿಶ್ವದಲ್ಲಿ ಭಾರತ ಸರ್ಕಾರದ ಆಡಳಿತ ವ್ಯವಸ್ಥೆ ಎಷ್ಟೊಂದು ಉಚ್ಛ್ರಾಯ ಸ್ಥಿತಿಯಲ್ಲಿದೆ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್ ಮಾತನಾಡಿ, “ವೋಟ್ -ಚೋರಿ ” ವಿರುದ್ಧ ನಡೆದ ಸಹಿ ಸಂಗ್ರಹ ಅಭಿಯಾನದ ಅಂಕಿ ಅಂಶಗಳ ಮಾಹಿತಿ ನೀಡಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೆ. ಪಿ. ಸಿ. ಸಿ ಪದಾಧಿಕಾರಿ ದಿನೇಶ್ ಪುತ್ರನ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಹಿರಿಯಡ್ಕ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂತೋಷ್ ಕುಲಾಲ್, ಜಿಲ್ಲಾ ಸೇವಾದಳ ಅಧ್ಯಕ್ಷ ಕಿಶೋರ್ ಎರ್ಮಾಳ್, ಜಿಲ್ಲಾ ಇಂಟಕ್ ಅಧ್ಯಕ್ಷ ಕಿರಣ್ ಹೆಗ್ಡೆ, ಕಾಪು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಕೆ. ಪಿ. ಸಿ. ಸಿ ಪದಾಧಿಕಾರಿ ಹರಿಪ್ರಸಾದ್ ರೈ, ಕಾಪು ವಿ. ಸ. ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಫುರ್ಟಡೋ, ಕಾಪು ವಿ. ಸ. ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಿಯಾಜ್, ಜಿಲ್ಲಾ ಮೀನುಗಾರರ ಕಾಂಗ್ರೆಸ್ ಘಟಕ ಅಧ್ಯಕ್ಷ ವಿಶ್ವಾಸ್ ಅಮೀನ್ ಮತ್ತಿತರ ಪ್ರಮುಖರು, ಬ್ಲಾಕ್ ಪದಾಧಿಕಾರಿಗಳು, ಗ್ರಾಮೀಣ ಕಾಂಗ್ರೆಸ್ ಸಮಿತಿ ಮತ್ತು ಬೂತ್ ಸಮಿತಿ ಅಧ್ಯಕ್ಷರುಗಳು, ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ, ಡಾ. ಬಿ. ಆರ್. ಅಂಬೇಡ್ಕರ್ ಪರಿಚಯ ನಿರ್ವಾಣ ದಿವಸದ ಅಂಗವಾಗಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವೈ. ಸುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ವಂದಿಸಿದರು.
ಕಾರ್ಯಕರ್ತರ ನಿಷ್ಠೆ ಮತ್ತು ಬದ್ಧತೆಯೇ ಪಕ್ಷದ ಪ್ರಬಲ ಶಕ್ತಿ – ಸೊರಕೆ

