Site icon ಉಡುಪಿ ನ್ಯೂಸ್ ಪ್ಲಸ್

ಅಗಸ್ಟ್ 30: ಸಿ.ಎಸ್.ಐ ಮಿಷನ್ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಪರೀಕ್ಷಾ ಘಟಕ (ಮ್ಯಾಮೋಗ್ರಫಿ) ಉದ್ಘಾಟನೆ

ಉಡುಪಿ ಸಿ.ಎಸ್.ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಸ್ತನ ಕ್ಯಾನ್ಸರ್ ಪರೀಕ್ಷಾ ಘಟಕದ (ಮ್ಯಾಮೋಗ್ರಫಿ ಯುನಿಟ್) ಉದ್ಘಾಟನೆ ಆಗಸ್ಟ್ 30 ರಂದು ಬೆಳಿಗ್ಗೆ 10 ಗಂಟೆಗೆ ಆಸ್ಪತ್ರೆಯ ಚಾಪೆಲ್ ನಲ್ಲಿ ನಡೆಯಲಿದೆ ಎಂದು ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಅವರು ನೂತನ ಘಟಕವನ್ನು ಉದ್ಘಾಟಿಸಲಿದ್ದಾರೆ. ಸಿಎಸ್‌ಐ, ಕೆಎಸ್ ಡಿ ಖಜಾಂಚಿ ಐವನ್ ಡಿ ಸೋನ್ಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭಾರತಿ ಹೇಮಚಂದ್ರ, ಡಾ. ದೀಪಾ ರಾವ್, ತನುಜಾ ಮಾಬೆನ್ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದರು. ಈ ಘಟಕವು ಮಹಿಳೆಯರಲ್ಲಿ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ತಡೆಗಟ್ಟುವಲ್ಲಿ ವಿಶೇಷವಾಗಿ ಉಡುಪಿ ಹಾಗೂ ಸುತ್ತಮುತ್ತಲಿನ ಕರಾವಳಿ ಮತ್ತು ಗ್ರಾಮೀಣ ಪ್ರದೇಶಗಳ ಮಹಿಳೆಯರ ಆರೋಗ್ಯ ಸುಧಾರಣೆಯಲ್ಲಿ ಬಹಳಷ್ಟು ಸಹಕಾರಿಯಾಗಲಿದೆ. ಇದು ಸಾರ್ವಜನಿಕ ಆರೋಗ್ಯ ಹಾಗೂ ರೋಗ ತಡೆಗಟ್ಟುವಿಕೆಯ ಆಸ್ಪತ್ರೆಯ ಸೇವೆಗಳಲ್ಲಿ ಇನ್ನೊಂದು ಮೈಲಿಗಲ್ಲು ಅಗಲಿದೆ ಎಂದು ಹೇಳಿದರು. ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ಮರಣಗಳಿಗೆ ಪ್ರಮುಖ ಕಾರಣವಾಗಿದ್ದು, ಪಶ್ಚಿಮ ದೇಶಗಳ ಜೊತೆ ಹೋಲಿಸಿದರೆ ಭಾರತದಲ್ಲಿ ಈ ರೋಗದಿಂದ ಸಾವಿನ ಪ್ರಮಾಣ ಹೆಚ್ಚು. ಆದರೆ ಸಮಯೋಚಿತ ತಪಾಸಣೆ ಮತ್ತು ಪತ್ತೆ ಹಚ್ಚಿವುದರಿಂದ ಈ ರೋಗವನ್ನು ನಿಯಂತ್ರಿಸಲು ಸಾಧ್ಯವಿದೆ ಎಂದರು. ನೂತನ ಮ್ಯಾಮೋಗ್ರಫಿ ಘಟಕದಲ್ಲಿ ಕೈಗೆಟುಕುವ ದರದಲ್ಲಿ ಸ್ತನ ಕ್ಯಾನ್ಸರ್ ತಪಾಸಣೆ ನಡೆಸಲಾಗುವುದು. ಅಲ್ಲದೆ, ಆರಂಭಿಕ ಹಂತದಲ್ಲಿ ರೋಗ ಪತ್ತೆ ಹಚ್ಚುವ ಮೂಲಕ ಮರಣ ಪ್ರಮಾಣ ಕಡಿಮೆ ಮಾಡುವುದು ಮತ್ತು ಚಿಕಿತ್ಸೆಯ ಫಲಿತಾಂಶವನ್ನು ಉತ್ತಮಗೊಳಿಸಲಾಗುವುದು. ಹಾಗೆಯೇ ಮಹಿಳಾ ಆರೋಗ್ಯ ಮತ್ತು ತಡೆಯಬಹುದಾದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಘಟಕದ ಮುಖ್ಯ ಉದ್ದೇಶವಾಗಿದೆ ಎಂದು‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಪಿಆರ್ ಒ ರೋಹಿ ರತ್ನಾಕರ್, ಆಪರೇಶನ್ ಮ್ಯಾನೇಜರ್ ಕಾವ್ಯಶ್ರೀ ಶೆಟ್ಟಿ ಉಪಸ್ಥಿತರಿದ್ದರು

Exit mobile version