Site icon ಉಡುಪಿ ನ್ಯೂಸ್ ಪ್ಲಸ್

ಕಾಪು ಶ್ರೀ ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮಾಜದ ಕಡೆಗಣನೆ – ದ.ಕ. ಮೊಗವೀರ ಮಹಾಜನ ಸಂಘದಿಂದ ಖಂಡನೆ

ಕಾಪು ಶ್ರೀ ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ ನೀಡದೆ ಮೊಗವೀರ ಸಮಾಜದ ಕಡೆಗಣನೆ- ದ.ಕ. ಮೊಗವೀರ ಮಹಾಜನ ಸಂಘದಿಂದ ಖಂಡನೆ: ಕಾಪು ಶ್ರೀ ಹೊಸಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯಲ್ಲಿ ಹಿಂದಿನಿಂದಲೂ ಮೊಗವೀರ ಸಮಾಜಕ್ಕೆ 2 ಪ್ರಾತಿನಿಧ್ಯ ನೀಡಲಾಗುತಿತ್ತು. ಅದರಂತೆ ಈಗಿನ ಸಮಿತಿಯಲ್ಲಿ ಶ್ರೀಧರ್ ಕಾಂಚನ್‌ರವರಿಗೆ ಪ್ರಾತಿನಿಧ್ಯ ನೀಡಲಾಗಿತ್ತು. ಆದರೆ ಶ್ರೀಧರ್ ಕಾಂಚನ್‌ರವರು ಅಕಾಲಿಕವಾಗಿ ದೈವಾಧೀನರಾಗಿದ್ದು, ಅವರ ಸ್ಥಾನಕ್ಕೆ ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ ನೀಡದೆ ಬೇರೆ ಸಮಾಜದವರನ್ನು ಆಯ್ಕೆ ಮಾಡಿ, ಕಾಪು ಕ್ಷೇತ್ರದಲ್ಲಿ ಬಹು ಸಂಖ್ಯೆಯಲ್ಲಿರುವ ಮೊಗವೀರ ಸಮಾಜಕ್ಕೆ ಅವಮಾನ ಮಾಡಲಾಗಿದೆ. ಸರಕಾರದ ಸ್ಥಳೀಯ ಪ್ರತಿನಿಧಿಗಳು ಹಾಗೂ ರಾಜ್ಯ ಸರಕಾರ ಮೊಗವೀರ ಸಮಾಜವನ್ನು ಕಡೆಗಣಿಸಿದ್ದರ ಬಗ್ಗೆ ದ.ಕ. ಮೊಗವೀರ ಮಹಾಜನ ಸಂಘವು ಆಕ್ರೋಶ ವ್ಯಕ್ತಪಡಿಸಿದ್ದು, ಸಮಾಜಕ್ಕೆ ಮಾಡಿದ ಅನ್ಯಾಯವನ್ನು ಈ ಕೂಡಲೇ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಹೊಸ ಮಾರಿಗುಡಿಯ ಜೀರ್ಣೋದ್ಧಾರ ಕಾರ್ಯದಲ್ಲಿ ನಮ್ಮ ಸಮಾಜ ಭಾಂಧವರು ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತೇವೆ. ಅದೇ ರೀತಿ ಈ ಹಿಂದೆ ಕಾಪು ಶ್ರೀ ಜನಾರ್ಧನ ದೇವಸ್ಥಾನದಲ್ಲಿ ಮೊಗವೀರ ಸಮಾಜದ ಇಬ್ಬರಿಗೆ ಪ್ರಾತಿನಿಧ್ಯವನ್ನೂ ನೀಡಲಾಗುತ್ತಿದ್ದು, ಆದರೆ ಈ ಬಾರಿ ಒಬ್ಬರಿಗೆ ಮಾತ್ರ ಪ್ರಾತಿನಿಧ್ಯ ನೀಡಿ, ಅಲ್ಲೂ ತಾರತಮ್ಯ ಮಾಡಿ ಮೊಗವೀರ ಸಮಾಜವು ಧಾರ್ಮಿಕ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಜನಪ್ರತಿನಿಧಿಗಳು ಹಾಗೂ ಸರಕಾರ ಕಡೆಗಣಿಸುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ.

Exit mobile version