ಉಡುಪಿ: ಬಡತನ ಮತ್ತು ಸಾಲದ ಸುಳಿಗೆ ಸಿಲುಕಿ ಮನನೊಂದು ಬಾವಿಗೆ ಹಾರಿದ ಅಪ್ಪನ ಜೊತೆ, ರಕ್ಷಿಸಲು ಹೋದ ಪುತ್ರನೂ ಸಾವನ್ನಪ್ಪಿರುವ ಘಟನೆ ಉಡುಪಿಯ ಕೋಟೇಶ್ವರದಲ್ಲಿ ನಡೆದಿದೆ. ಪತಿ ಹಾಗೂ ಮಗನನ್ನು ರಕ್ಷಿಸಲು ಮುಂದಾದ ಪತ್ನಿ ಕೂಡ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ.ಕೋಟೇಶ್ವರದ ಅಂಕದಕಟ್ಟೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಧವ ದೇವಾಡಿಗ ಹಲವಾರು ಕಡೆ ಸಾಲ ಮಾಡಿದ್ದರು. ಬಡ್ಡಿ ಕಟ್ಟಲಾರದೆ, ಸಾಲ ಪಡೆದ ಹಣ ತೀರಿಸಲಾಗದೆ ಪರಿತಪಿಸುತ್ತಿದ್ದರು. ಇಂದು ಬೆಳಗಿನ ಜಾವ ಮನೆಯಲ್ಲಿ ಮಲಗಿದ್ದ ಮಾಧವ ದೇವಾಡಿಗ ಬಾವಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದಾರೆ. ಈ ವಿಚಾರ ತಿಳಿದ ಮಗ ಪ್ರಸಾದ, ತಂದೆಯ ರಕ್ಷಣೆಗಾಗಿ ಬಾವಿಗೆ ಹಾರಿದ್ದಾನೆ. ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ತಾರಾ ದೇವಾಡಿಗ ಬಾವಿಗೆ ಹಾರಿ ಇಬ್ಬರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಅಷ್ಟರಲ್ಲಿ ಪತಿ ಮತ್ತು ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ತಾಯಿ ತಾರಾ ದೇವಾಡಿಗ ಅವರಿಗೆ ಈಜು ಬರುತ್ತಿದ್ದ ಕಾರಣ, ಬಾವಿಯೊಳಗಿದ್ದ ಪೈಪ್ ಮೂಲಕ ರಕ್ಷಣೆ ಪಡೆದಿದ್ದಾರೆ. ಅಕ್ಕಪಕ್ಕದ ಮನೆಯವರು ಕೂಡಲೇ ಅಗ್ನಿಶಾಮಕದಳಕ್ಕೆ ಫೋನ್ ಮಾಡಿದ್ದಾರೆ. ಅಗ್ನಿಶಾಮಕ ದಳದವರು ತಾರಾ ದೇವಾಡಿಗ ಅವರನ್ನು ರಕ್ಷಣೆ ಮಾಡಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಾಲದ ಬಾಧೆಯಿಂದ ಆತ್ಮಹತ್ಯೆ ಡಿಕೊಂಡಿರಬಹುದು ಎಂಬ ಪ್ರಾಥಮಿಕ ವರದಿ ಇದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ತಾರಾ ದೇವಾಡಿಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.
ಉಡುಪಿ: ಬಾವಿಗೆ ಹಾರಿದ ತಂದೆ, ರಕ್ಷಣೆಗೆ ಹೋದ ಮಗ – ಇಬ್ಬರೂ ದುರಂತ ಅಂತ್ಯ

