Site icon ಉಡುಪಿ ನ್ಯೂಸ್ ಪ್ಲಸ್

ಜಗತ್ತಿಗೆ ಶಾಂತಿ, ಸೌಹಾರ್ದತೆಯ ಸಂದೇಶ ಸಾರಿದ ಧರ್ಮ ಇಸ್ಲಾಂ : ಸೊರಕೆ

ವಿಭಿನ್ನ ಸಂಸ್ಕೃತಿ, ವಿಭಿನ್ನ ಆಚಾರ – ವಿಚಾರ ಗಳನ್ನು ಪಾಲಿಸುವ ಅನೇಕ ಧರ್ಮಗಳು, ವಿವಿಧತೆಯಲ್ಲಿ ಏಕತೆ, ಏಕತೆಯಲ್ಲಿ ಅನೇಕತೆಯನ್ನು ಹೊಂದಿರುವ, ವಿಶ್ವದಲ್ಲಿ ಎಲ್ಲಿಯೂ ಕಾಣಸಿಗದಂತಹ ವಿಶಿಷ್ಟವಾದ ದೇಶ ನಮ್ಮ ಭಾರತ ಎಂಬುದು ಭಾರತೀಯರಾದ ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಆದರೆ, ಧರ್ಮ, ಜಾತಿಯ ವಿಚಾರದಲ್ಲಿ ಪ್ರಸಕ್ತ ದೇಶದೆಲ್ಲೆಡೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುವಾಗ, ದೇಶದ ಪ್ರಜಾಪ್ರಭುತ್ವದ ಅಡಿಗಲ್ಲುಗಳೆನಿಸಿರುವ ಸಾಮಾಜಿಕ ನ್ಯಾಯ, ಸಾಮರಸ್ಯತೆ, ಸೌಹಾರ್ದತೆ, ಸಹೋದರತೆ ಮತ್ತು ಜಾತ್ಯತೀತತೆಯು ಅರ್ಥಹೀನ ಗೊಳ್ಳುತ್ತಿರುವಂತೆ ಭಾಸವಾಗುತ್ತಿರುವುದು ಆತಂಕದ ವಿಚಾರವಾಗಿರುತ್ತದೆ, ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನದ್ದಾಗಿರುತ್ತದೆ.
ಸರ್ವಧರ್ಮಿಯರನ್ನು ಪ್ರೀತಿಸುವ, ಗೌರವಿಸುವ ಮೂಲಕ ಜಗತ್ತಿಗೆ ಶಾಂತಿ – ಸೌಹಾರ್ದತೆಯ ಸಂದೇಶವನ್ನು ಸಾರಿದ ಧರ್ಮವೆಂದರೆ ಅದು ಇಸ್ಲಾಂ ಧರ್ಮ ಎಂದು, ಕೆ. ಪಿ. ಸಿ. ಸಿ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದರು. ಅವರು, ಇಂದು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಹಯೋಗದಲ್ಲಿ, ಕಾಪು – ಕೊಪ್ಪಲಂಗಡಿಯ ಕಮ್ಯುನಿಟಿ ಸಭಾ ಭವನದಲ್ಲಿ “ಸೌಹಾರ್ದ ಇಫ್ತಾರ್ ಕೂಟ ” ಕಾರ್ಯಕ್ರಮವನ್ನು ಏರ್ಪಡಿಸಿ, ಅದರ ಸಭಾಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಸಲ್ಮಾನ ಬಾಂಧವರ ಪವಿತ್ರ ರಂಜಾನ್ ಉಪವಾಸದ ಇಫ್ತಾರ್ ಕೂಟದಲ್ಲಿ ಎಲ್ಲಾ ಧರ್ಮಿಯರು ಭಾಗವಹಿಸಿರುವುದು ಸೌಹಾರ್ದತೆಯ ಸಂಕೇತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಘಾಟನಾ ಭಾಷಣ ಮಾಡಿದ ಪೊಲಿಪು ಜುಮ್ಮಾ ಮಸೀದಿಯ ಖತೀಬರಾದ ಬಹುಮಾನ್ಯ ಇರ್ಷಾದ್ ಸಅದಿ ಯವರು, ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ನಲ್ಲಿಯೂ ಭೋದಿಸಿರವುದು ಸರ್ವ ಧರ್ಮ ಸಹಿಷ್ಣುತೆಯನ್ನು, ಎಲ್ಲಾ ಧರ್ಮವನ್ನು ಗೌರವಿಸುವುದು, ಎಲ್ಲರೊಂದಿಗೂ ಪ್ರೀತಿ, ಶಾಂತಿ, ಸೌಹಾರ್ದಾತೆ ಮತ್ತು ಸಹೋದರತೆಯ ಭಾವದೊಂದಿಗೆ ಬದುಕಬೇಕೆಂಬುದು ಎಂದು ತಿಳಿ ಹೇಳಿದರು. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರ ಜನರನ್ನು ಒಗ್ಗೂಡಿಸುವ, ಜಾತ್ಯತೀತತೆಯನ್ನು, ಸಾಮರಸ್ಯವನ್ನು ಉಳಿಸುವ ಪ್ರಯತ್ನದ ಇಂತಹ ಕಾರ್ಯಕ್ರಮಗಳು ಅತ್ಯಂತ ಶ್ಲಾಘಣೀಯ ಎಂದರು. ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಆಲ್ಬನ್ ರಾಡ್ರಿಗಸ್ ರವರು ಮಾತನಾಡಿ, ಮುಸಲ್ಮಾನ ಬಾಂಧವರು ಪವಿತ್ರ ರಂಜಾನ್ ತಿಂಗಳಲ್ಲಿ ಆಚರಿಸುವ ಕಠಿಣ ಉಪವಾಸದ ಪ್ರಾಮುಖ್ಯತೆ ಮತ್ತು ವಿಶೇಷತೆಯನ್ನು ವಿಸ್ತ್ರತವಾಗಿ ತಿಳಿಸಿ, ಸೌಹಾರ್ದತೆಯ ಸಂದೇಶವನ್ನು ನೀಡಿದರು. ಕೆ. ಪಿ. ಸಿ. ಸಿ ಮಾಧ್ಯಮ, ನೀತಿ ಮತ್ತು ಸಂಶೋಧನೆ ಸಮಿತಿಯ ಸಂಚಾಲಕರಾದ ಅಮೃತ್ ಶೆಣೈ ಯವರು ಮಾತನಾಡಿ, ಪ್ರಸಕ್ತ ದೇಶದ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವವರ ಧರ್ಮ- ಧರ್ಮ ಗಳ ನಡುವೆ ಒಡಕು ಮೂಡಿಸುವ ರಾಜಕೀಯ ಪಿತೂರಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದರು.
ಸಭಾಕಾರ್ಯಕ್ರಮದ ನಂತರ ಮುಸಲ್ಮಾನ ಬಾಂಧವರೊಂದಿಗೆ ಇಫ್ತಾರ್ – ಸಹಭೋಜನ ಕಾರ್ಯಕ್ರಮ ದಲ್ಲಿ ಎಲ್ಲ ಧರ್ಮಿಯರು ಭಾಗವಹಿಸಿದರು. ಪ್ರಮುಖರಾದ, ನವೀನ್ ಚಂದ್ರ ಜೆ. ಶೆಟ್ಟಿ, ಶಿವಾಜಿ ಸುವರ್ಣ ಬೆಳ್ಳೆ, ಹರಿಪ್ರಸಾದ್ ರೈ, ಹರೀಶ್ ಕಿಣಿ, ವೈ. ಸುಕುಮಾರ್, ನಿಯಾಜ್ ಪಡುಬಿದ್ರೆ, ಹಸನಬ್ಬ ಶೇಖ್, ಶಬೀ ಅಹ್ಮದ್ ಖಾಝಿ, ವಿಲ್ಸನ್ ರಾಡ್ರಿಗಸ್, ಗೀತಾ ವಾಗ್ಲೆ, ಶಾಂತಲತಾ ಶೆಟ್ಟಿ, ನವೀನ್ ಎನ್. ಶೆಟ್ಟಿ, ಸುನಿಲ್ ಬಂಗೇರ, ದೀಪಕ್ ಎರ್ಮಾಳ್, ರೋಶನ್ ಶೆಟ್ಟಿ, ಎಚ್. ಅಬ್ದುಲ್ಲ, ಮನ್ಸೂರ್ ಮೂಳೂರು, ಸುಧೀರ್ ಕರ್ಕೇರ, ಮೊಹಮ್ಮದ್ ಸಾದಿಕ್, ರಮೀಜ್ ಹುಸೇನ್, ಹಮೀದ್ ಯೂಸುಫ್, ಅಶೋಕ್ ನಾಯರಿ ಮತ್ತಿತರ ಮುಖಂಡರು, ಪುರಸಭೆಯ ಸದಸ್ಯರು, ವಿವಿಧ ಗ್ರಾಮಗಳ ಪಂಚಾಯತ್ ಸದಸ್ಯರು, ವಿವಿಧ ಘಟಕ / ಸಮಿತಿಗಳ ಅಧ್ಯಕ್ಷರು / ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ಸ್ವಾಗತಿಸಿದರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ರವರು ಧನ್ಯವಾದವಿತ್ತರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.

Exit mobile version